ಕೌಟುಂಬಿಕ ವ್ಯವಸ್ಥೆಯಲ್ಲಿ ಪುರುಷನ ಪಾತ್ರ ಅನನ್ಯ

ಕಲಬುರಗಿ.ನ.19: ಪುರುಷನು ಸಂಸಾರದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಸ್ವೀಕರಿಸಿ ತನ್ನ ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವ ಮೂಲಕ ಕೌಟುಂಬಿಕ ವ್ಯವಸ್ಥೆಯಲ್ಲಿ ಕುಟುಂಬದ ಮುಖ್ಯಸ್ಥನಾಗಿ ಅತ್ಯಂತ ಪ್ರಮುಖವಾದ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪ್ರಮುಖವಾದ ಕೊಡುಗೆಯನ್ನು ನೀಡುತ್ತಾನೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಎಸ್.ಪಾಟೀಲ ಬೊಮ್ಮನಳ್ಳಿ ಮಾತನಾಡಿ, ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಸಂಸ್ಕಾರ, ಮೌಲ್ಯಗಳು, ಗುರು-ಹಿರಿಯರಿಗೆ ಗೌರವ ನೀಡುವುದು, ರಾಷ್ಟ್ರ ಪ್ರೇಮ, ಮಾನವೀಯತೆಯಂತಹ ಮುಂತಾದ ಮೌಲ್ಯಗಳನ್ನು ನೀಡಿ ರಾಷ್ಟ್ರದ ಸತ್ಪ್ರಜೆಯನ್ನಾಗಿಸುವಲ್ಲಿ ಪುರುಷನ ಪಾತ್ರ ಅಮೋಘವಾಗಿದೆ. ತಾಯಿಯಷ್ಟೆ ಗೌರವ ತಂದೆಗೂ ನೀಡಬೇಕು. ಪುರುಷರಿಗೆ ನ್ಯಾಯವೆಂಬ ನೆಪದಲ್ಲಿ ಶೋಷಣೆ ಸಲ್ಲದೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಶ್ವನಾಥ ಶೇಗಜೀ ದಂಗಾಪೂರ, ಅಮರ ಜಿ.ಬಂಗರಗಿ, ಎಸ್.ಎಸ್.ಪಾಟೀಲ ಬಡದಾಳ, ಓಂಕಾರ ಗೌಳಿ ಸೇರಿದಂತೆ ಹಲವರಿದ್ದರು.