ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯ ಅಗತ್ಯ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.18:- ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯದಿಂದ ಮಾತ್ರ ಕಷ್ಟಗಳನ್ನು ಎದುರಿಸಲು ಸಾಧ್ಯ ಎಂದು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ತಿಳಿಸಿದರು.
ಬಿಳಿಗಿರಿರಂಗನ ಬೆಟ್ಟದ ಜೆಎಸ್‍ಎಸ್ ಆಶ್ರಮದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕÀರಿಗಾಗಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರದ ನಾಲ್ಕನೇ ದಿನ ಕೌಟುಂಬಿಕ ಸಾಮರಸ್ಯ ಕುರಿತು ಉಪನ್ಯಾಸ ನೀಡಿದ ಅವರು, ಸುಖವನ್ನು ಹಂಚಿಕೊಂಡಾಗ ಸಂತೋಷ ಹೆಚ್ಚುತ್ತದೆ. ದೇವರ ದಯೆ ಎಂಬುದು ಸಂಕಷ್ಟದ ಸ್ವರೂಪದಲ್ಲೂ ಬರುವ ಸಾಧ್ಯತೆಯಿರುತ್ತದೆ. ಇಂದಿನ ಸಮಾಜದಲ್ಲಿ ಹಲವಾರು ಪ್ರಲೋಭನೆಗಳು ಸಾಮರಸ್ಯದ ಮೇಲೆ ಪ್ರಭಾವ ಬೀರುತ್ತವೆ.
ಧಾರ್ಮಿಕ ವಿಧಿ-ವಿಧಾನಗಳ ನೆಲೆಯಲ್ಲಿ ನಮ್ಮ ಕೌಟುಂಬಿಕ ಸಾಮರಸ್ಯ ಅಡಗಿದೆ. ಸೇವೆ, ಪ್ರಾಮಾಣಿಕತೆ, ಸತ್ಯ, ನಿμÉ್ಠ ಇವೆಲ್ಲವೂ ಸಾಮರಸ್ಯದ ಅಂಗಗಳು ಎಂದು ಹೇಳಿದರು.
ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದಜೀ ಮಾತನಾಡಿ, ಭಾರತೀಯ ಸಂಸ್ಕøತಿ ಅತ್ಯುನ್ನತವಾದುದು. ಜಗತ್ತಿನಲ್ಲಿ ಎಲ್ಲಿಯೂ ಕಾಣದ ಶ್ರೀಮಂತ ಪರಂಪರೆ ನಮ್ಮದೆಂಬುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ. ನಮ್ಮ ಪರಂಪರೆ ಹಾಗೂ ಸಂಸ್ಕøತಿಯನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿಜವಾದ ಜೀವನ ಎಂದರೆ ಮೌಲ್ಯ ಪೂರ್ಣವಾದದ್ದು. ಜಗತ್ತಿನಲ್ಲಿ ಅಶಾಂತಿಗೆ ಕಾರಣರಾದವರು ಎಲ್ಲಿಯೂ ಸ್ಥಾನ ಪಡೆದಿಲ್ಲ. ಶಾಂತಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಮಾತನಾಡಿ, ಎಲ್ಲಾ ಶುಭಕಾರ್ಯಗಳು ಮೊದಲಿಗೆ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುತ್ತವೆ. ದೇವರು ಸರ್ವಾಂತರ್ಯಾಮಿ ಆ ಭಗವಂತನನ್ನು ಕಾಣಲು ಪ್ರಾರ್ಥನೆ ಮುಖ್ಯವಾಗುತ್ತದೆ. ಪ್ರಾಮಾಣಿಕ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ. ಸ್ವಾರ್ಥದ ಉದ್ದೇಶದಿಂದ ಪ್ರಾರ್ಥನೆ ಸಲ್ಲದು. ಸಮಷ್ಟಿಯ ಒಳಿತಿಗೆ ಪ್ರಾರ್ಥಿಸಬೇಕು ಎಂದು ಹೇಳಿದರು.
ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಪಾಲ್ಗೊಂಡಿದ್ದರು. ಸಂಜೆ ದೇಸಿ ಆಟಗಳನ್ನು ಆಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು. ಶಿಬಿರದಲ್ಲಿ ತುಮಕೂರು, ಬೆಳಗಾವಿ, ಬೆಂಗಳೂರು, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ 70ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.