ಕೌಟುಂಬಿಕ ಕಲಹಕ್ಕೆ ಅತ್ತೆ, ಮಾವ ಬಲಿ

ಕೆ.ಆರ್.ಪೇಟೆ, ನ.01: ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಕೌಟುಂಬಿಕ ಕಲಹಕ್ಕೆ ನಾಗಮಣಿ ಎಂಬ ಗೃಹಿಣಿ ತನ್ನ ಪತಿ, ಅತ್ತೆ ಮತ್ತು ಮಾವನಿಗೆ ಮಾರಣಾಂತಿಕವಾಗಿ ಹೊಡೆದು ಕೊಲೆಗೆ ಪ್ರಯತ್ನಿಸಿದ್ದ ಘಟನೆ ನಡೆದಿತ್ತು. ಆದರೆ ಹಲ್ಲೆಗೊಳಗಾಗಿದ್ದ ನಾಗಮಣಿಯ ಪತಿ ನಾಗರಾಜು(50) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ್ದರು.ಅತ್ತೆ ಮಾವ ಇಬ್ಬರು ಸಾವು ಬದುಕಿನ ನಡುವೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಶನಿವಾರ ರಾತ್ರಿ ಸುಮಾರು 10 ಗಂಟೆಯಲ್ಲಿ ಅವರಿಬ್ಬರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮಾವ ವೆಂಕಟೇಗೌಡ(70), ಅತ್ತೆ ಕುಳ್ಳಮ್ಮ (60) ಇಬ್ಬರಿಗೂ ತಲೆಗೆ ಗಂಭೀರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಈಗ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಅಲ್ಲಿಗೆ ಹಲ್ಲೆಗೊಳಗಾಗಿದ್ದ ಮೂವರು ಸಾವನ್ನಪ್ಪಿದಂತಾಗಿದೆ ನಾಗಮಣಿ ಎಂಬ ಮಹಿಳೆ ನಡುರಾತ್ರಿ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಕಾಯಿ ತುರಿಯುವ ಹೀಳಿಗೆ ಮಣೆಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಳು ನಂತರ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ನಾಗಮಣಿ ಎಂಬುವರು ಸದಾ ಕುಟುಂಬ ಸದಸ್ಯರ ಜೊತೆಗೆ ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡುತ್ತಿದ್ದರು. ಹಲವಾರು ಬಾರಿ ರಾಜಿ ಪಂಚಾಯಿತಿಗಳು ನಡೆದಿದ್ದರೂ ಆಕೆ ಯಾರ ಮಾತನ್ನೂ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಮನೆಯಲ್ಲಿ ಹೊಂದಾಣಿಕೆಯ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ನಾಗಮಣಿಯನ್ನು ಪೆÇಲಿಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಮೂವರ ಕೊಲೆಗೆ ಕಾರಣಳಾದ ನಾಗಮಣಿ ದಂಪತಿಗಳಿಗೆ 18 ಮತ್ತು 20 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದು ಈಗ ಆ ಮಕ್ಕಳು ಅನಾಥರಾಗಿದ್ದಾರೆ.ಈ ಘಟನೆಯಿಂದ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.