ಕೋಸ್ಟಾರೀಕಾ ವಿರುದ್ಧ ಸ್ಪೇನ್ ಅಬ್ಬರ

ದೋಹಾ (ಕತಾರ್), ನ.೨೩- ಪ್ರಸಕ್ತ ಕತಾರ್ ವಿಶ್ವಕಪ್ ಫುಟ್ಬಾಲ್‌ನಲ್ಲಿ ಘಟಾನುಘಟಿ ತಂಡಗಳು ಆಘಾತಕಾರಿ ರೀತಿಯಲ್ಲಿ ಸೋಲುಣ್ಣುತ್ತಿದ್ದರೆ ಇತ್ತ ಮತ್ತೊಂದು ಬಲಿಷ್ಠ ತಂಡ ಸ್ಪೇನ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಕೋಸ್ಟಾ ರೀಕಾ ವಿರುದ್ಧ ೭-೦ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪೇನ್, ತನ್ನ ವಿಶ್ವಕಪ್ ಫುಟ್ಬಾಲ್‌ನ ಇತಿಹಾಸದಲ್ಲಿ ಬೃಹತ್ ಜಯ ಸಾಧಿಸಿದ ಸಾಧನೆ ಪ್ರದರ್ಶಿಸಿದೆ. ಸ್ಪೇನ್ ತನ್ನ ಮುಂದಿನ ಪಂದ್ಯವನ್ನು ಬಲಿಷ್ಠ ಜರ್ಮನಿ ವಿರುದ್ಧ ಆಡಲಿದೆ.
ಇಲ್ಲಿನ ಅಲ್ ಥುಮಾಮಾ ಸ್ಟೇಡಿಯಂನಲ್ಲಿ ನಡೆದ ಗುಂಪಿನ ಪಂದ್ಯದಲ್ಲಿ ಟೀಕಿ-ಟಾಕಾ ಆಟದ ಮೂಲಕ ಪ್ರಸಿದ್ದಿ ಪಡೆದಿರುವ ಸ್ಪೇನ್ ಅಮೋಘ ಆಟ ಪ್ರದರ್ಶಿಸಿತು. ಗ್ರೂಪ್ ಆಫ್ ಡೆತ್ ಎಂದೇ ಕರೆಯಲ್ಪಡುವ ಗುಂಪಿನ ಪ್ರಮುಖ ಪಂದ್ಯವನ್ನು ಗೆಲ್ಲುವ ಮೂಲಕ ಸ್ಪೇನ್ ಮುಂದಿನ ಸುತ್ತಿಗೇರುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಇನ್ನು ಪಂದ್ಯದ ೧೧ನೇ ನಿಮಿಷದಲ್ಲೇ ಸ್ಪೇನ್ ಗೋಲಿನ ಖಾತೆ ತೆರೆಯಿತು. ಓಲ್ಮೊ ಆಕರ್ಷಕ ಗೋಲಿನ ನೆರವಿನಿಂದ ಸ್ಪೇನ್ ಪಂದ್ಯದಲ್ಲಿ ಮೊದಲ ಗೋಲು ಸಾಧಿಸಿದರೆ ೨೧ನೇ ನಿಮಿಷದಲ್ಲಿ ಅಸೆನ್ಸಿಯೋ ಈ ಮುನ್ನಡೆ ೨-೦ಗೆ ಏರಿಸಿದರು. ಅಲ್ಲದೆ ೩೧ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಟೋರೆಸ್ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಮೊದಲಾರ್ಧದಲ್ಲಿ ಸ್ಪೇನ್ ೩-೦ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಅಲ್ಲದೆ ದ್ವಿತೀಯಾರ್ಧದಲ್ಲೂ ತನ್ನ ಅಬ್ಬರ ಮುಂದುವರೆಸಿತು. ೫೪ನೇ ನಿಮಿಷದಲ್ಲಿ ಟೋರೆಸ್ ಮೊತ್ತೊಂದು ಗೋಲು ಹೊಡೆದು ಮಿಂಚಿದರು. ಇನ್ನು ೭೪ನೇ ನಿಮಿಷದಲ್ಲಿ ಗಾವಿ ತಂಡದ ಪರ ನಾಲ್ಕನೇ ಗೋಲು ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಗೋಲು ಗಳಿಸುವ ಮೂಲಕ ಗಾವಿ ತಂಡದ ಪರ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಕಿರಿಯ ಆಟಗಾರ ಎಂಬ ಹೆಗ್ಗಲಿಕೆಗೆ ಪಾತ್ರರಾದರು. ೯೦ನೇ ನಿಮಿಷದಲ್ಲಿ ಸೋಲೆರ್ ಹಾಗೂ ಹೆಚ್ಚುವರಿ ಅವಧಿಯಲ್ಲಿ ಮೊರಾಟಾ ಗಳಿಸಿದ ಗೋಲಿನ ನೆರವಿನಿಂದ ಪಂದ್ಯವನ್ನು ಸ್ಪೇನ್ ಭರ್ಜರಿ ೭-೦ ಅಂತರದಲ್ಲಿ ಗೆಲ್ಲಲು ಸಾಧ್ಯವಾಯಿತು. ಇನ್ನು ಸ್ಪೇನ್ ತನ್ನ ಮುಂದಿನ ಪಂದ್ಯವನ್ನು ಜರ್ಮನಿ ವಿರುದ್ಧ ಆಡಲಿದ್ದು, ಇದು ಸಹಜವಾಗಿಯೇ ಎಲ್ಲರ ಗಮನ ಸೆಳೆದಿದೆ. ಅತ್ತ ಜಪಾನ್ ವಿರುದ್ಧ ಅಚ್ಚರಿಯ ಸೋಲುಂಡಿರುವ ಜರ್ಮನಿ ತನ್ನ ಮುಂದಿನ ಸ್ಪೇನ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಿದೆ.