ಕೋಸ್ಟಲ್ ಬರ್ತ್ ಯೋಜನೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ


ಮಂಗಳೂರು, ಎ.೬- ಕೇಂದ್ರ ಸರಕಾರವು ಬೆಂಗರೆಯಲ್ಲಿ ನಿರ್ಮಿಸಲು ಹೊರಟ ‘ಸಾಗರಮಾಲ’ (ಕೋಸ್ಟಲ್ ಬರ್ತ್) ಯೋಜನೆಯ ಕಾಮಗಾರಿಯನ್ನು ವಿರೋಧಿಸಿ ‘ಕೋಸ್ಟಲ್ ಬರ್ತ್ ವಿರೋಧಿ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಸೋಮವಾರ ಕಸಬಾ ಬೆಂಗರೆಯ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಯೋಜನೆಯ ಕೈಪಿಡಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಘೋಷಣಾ ಫಲಕ ಪ್ರದರ್ಶಿಸಿ ಸರಕಾರದ ನಿಲುವನ್ನು ಖಂಡಿಸಿದರು.
ಮಹಿಳೆಯರು, ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬೆಳಗ್ಗೆ ೮ ಗಂಟೆಗೆ ಆರಂಭಗೊಂಡ ಪ್ರತಿಭಟನೆಯು ಸಂಜೆ ೬ರವರೆಗೆ ಮುಂದುವರಿಯಿತು. ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾಗರಮಾಲ ಯೋಜನೆಯ ಕಾಮಗಾರಿ ಸಾಗುತ್ತಿತ್ತು. ಹಾಗಾಗಿ ೫೦೦ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್‌ನಲ್ಲಿ ಕಂಡು ಬಂದರು. ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆಯ ಜೊತೆ ನಾಗರಿಕರು ಸಂಘರ್ಷಕ್ಕಿಳಿಯದೆ ಶಾಂತಿಯುತ ಪ್ರತಿಭಟನೆ ನಡೆಸಲು ಮನವಿ ಮಾಡಿದರಲ್ಲದೆ ಜಿಲ್ಲಾಡಳಿತದ ಜೊತೆ ಮಾತುಕತೆ ನಡೆಸಲು ಸಲಹೆ ನೀಡಿದರು. ನಾವಿಲ್ಲಿ ಸುಮಾರು ೨೦೦ ವರ್ಷದಿಂದ ೩ ಸಾವಿರಕ್ಕೂ ಅಧಿಕ ಮನೆಗಳಲ್ಲಿ ೨೫ ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದೇವೆ. ನಮಗೆ ಇನ್ನೂ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಪಿಯುಸಿ, ಪದವಿ ಕಾಲೇಜಿನ ನಿರೀಕ್ಷೆಯಲ್ಲಿ ನಾವಿದ್ದೇವೆ. ಆದರೆ ಸರಕಾರ ಅದನ್ನು ಕಲ್ಪಿಸದೆ ಸಾಗರಮಾಲ ಯೋಜನೆ ಜಾರಿಗೊಳಿಸಲು ಸರಕಾರಿ ಪ್ರೌಢಶಾಲೆಯನ್ನೇ ಬಲಿ ಪಡೆಯುತ್ತಿವೆ. ಇಲ್ಲಿ ಯಾವುದೇ ಬ್ಯಾಂಕ್‌ನ ಶಾಖೆ ಇಲ್ಲ, ಎಟಿಎಂ ಇಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ, ಒಳಚರಂಡಿ ವ್ಯವಸ್ಥೆಯೂ ಇಲ್ಲ. ಅದನ್ನೆಲ್ಲಾ ಕಲ್ಪಿಸುವುದನ್ನು ಬಿಟ್ಟು ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಲು ಪ್ರಯತ್ನಿಸುತ್ತಿವೆ. ಹಾಗಾಗಿ ಯಾವ ಕಾರಣಕ್ಕೂ ನಾವು ಈ ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶಿತರಾದರು. ಕಾರ್ಪೊರೇಟರ್ ಮುನೀಬ್ ಬೆಂಗರೆ ಮಾತನಾಡಿ ‘ನಾವಿಂದು ವಸ್ತುಶಃ ಬೆಂಗರೆ ಬಂದ್ ಮಾಡಿ ಈ ಪ್ರತಿಭಟನೆ ಅಯೋಜಿಸಿದ್ದೇವೆ. ಬೆಂಗರೆ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಬೋಟ್ ಬಂದ್ ಮಾಡಲಾಗಿದೆ. ಇದು ನಮ್ಮ ಅಸ್ತಿತ್ವದ ಪ್ರಶ್ನೆಯಾದ ಕಾರಣ ಮಹಿಳೆಯರು, ಮಕ್ಕಳು, ಹಿರಿಯರೂ ಪಾಲ್ಗೊಂಡಿದ್ದಾರೆ. ಇಂದಿನದ್ದು ಸಾಂಕೇತಿಕ ಪ್ರತಿಭಟನೆಯಾಗಿದೆ. ಸರಕಾರ ಈ ಯೋಜನೆಯನ್ನು ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಇದು ಜನವಿರೋಧಿ ಸರಕಾರವಾಗಿದೆ. ಕಳೆದ ೨-೩ ತಿಂಗಳಿನಿಂದ ಇದರ ವಿರುದ್ಧ ಸಂಘಟಿತ ಧ್ವನಿ ಎತ್ತುತ್ತಿದ್ದೇವೆ. ಆದರೆ, ಜಿಲ್ಲಾಡಳಿತ ಸಕಾರಾತ್ಮಕಾಗಿ ಸ್ಪಂದಿಸಿಲ್ಲ. ಇದೀಗ ಪೊಲೀಸ್ ಬಲಪ್ರಯೋಗಿಸಿ ಕಾಮಗಾರಿ ಆರಂಭಿಸಿರುವುದು ಖಂಡನೀಯ ಎಂದು ಮುನೀಬ್ ಬೆಂಗರೆ ನುಡಿದರು. ಕಸಬಾ ಬೆಂಗರೆ ಮಸೀದಿಯ ಅಧ್ಯಕ್ಷ ಅಸ್ಲಂ ಬೆಂಗರೆ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನೆಯಲ್ಲಿ ಮಸೀದಿಯ ಉಪಾಧ್ಯಕ್ಷ ಕೆಬಿಆರ್ ಸುಲೈಮಾನ್, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಬಿ.ಎ. ಮೊಯ್ದಿನ್ ಬಾವಾ, ಐವನ್ ಡಿಸೋಜ, ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಎಸ್‌ಡಿಟಿಯು ರಾಜ್ಯ ಮುಖಂಡ ಜಲೀಲ್ ಕೃಷ್ಣಾಪುರ, ಎಸ್‌ಡಿಪಿಐ ಸ್ಥಳೀಯ ಮುಖಂಡರಾದ ಸುಹೈಲ್ ಖಾನ್, ವದೂದ್ ಬೆಂಗರೆ, ಅಕ್ಬರ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಸ್ಥಳೀಯ ಮುಖಂಡರಾದ ನೌಶಾದ್ ಬೆಂಗರೆ, ಹನೀಫ್ ಬೆಂಗರೆ, ಕಾಂಗ್ರೆಸ್ ಮುಖಂಡ ಬಿಲಾಲ್ ಮೊಯ್ದಿನ್, ಜೆಡಿಎಸ್ ಮುಖಂಡ ಲತೀಫ್ ಬೆಂಗರೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಶ್ರೀಕಾಂತ್ ಸಾಲ್ಯಾನ್, ಗ್ರಾಜ್ಯುವೇಟ್ ಫೋರಂನ ತ್ವಯ್ಯೂಬ್, ಜಮಾಅತೆ ಇಸ್ಲಾಮೀ ಹಿಂದ್‌ನ ಮುಖಂಡ ಲತೀಫ್ ಆಲಿಯಾ ಮತ್ತಿತರರು ಪಾಲ್ಗೊಂಡಿದ್ದರು.