ಕೋವ್ಯಾಕ್ಸಿನ್ ಲಸಿಕೆಗೆ ಕೆನಡಾ ಅನುಮೋದನೆ

ಮಾಂಟ್ರೆಲ್ (ಕೆನಡಾ), ನ.೩೦- ಭಾರತದ ಹೆಮ್ಮೆಯ ಔಷಧಿ ಕಂಪೆನಿಗಳಲ್ಲಿ ಒಂದಾಗಿರುವ ಭಾರತ್ ಬಯೋಟೆಕ್‌ಗೆ ಮತ್ತೊಂದು ಗೆಲುವು ಲಭಿಸಿದೆ. ಬ್ರಿಟನ್ ಬಳಿಕ ಇದೀಗ ಕೆನಡಾ ಕೂಡ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದೆ. ಈ ಮೂಲಕ ಕೊವ್ಯಾಕ್ಸಿನ್ ಪಡೆದುಕೊಂಡವರಿಗೆ ಕೆನಡಾ ಪ್ರವೇಶ ಮುಕ್ತವಾಗಿರಲಿದೆ.
ನವೆಂಬರ್ ೧೯ರಂದು ಕೋವ್ಯಾಕ್ಸಿನ್‌ಗೆ ಕೆನಡಾ ಅನುಮೋದನೆ ನೀಡಿದ್ದು, ಇಂದಿನಿಂದ (ಮಂಗಳವಾರ) ಸರ್ಕಾರದ ಅಧಿಸೂಚನೆಗೆ ಚಾಲನೆ ಸಿಗಲಿದೆ. ಅದೂ ಅಲ್ಲದೆ ಚೀನಾದ ಸೈನೋಫಾರ್ಮ್ ಹಾಗೂ ಸೈನೋವ್ಯಾಕ್ ಲಸಿಕೆಗೆ ಕೂಡ ಇದೇ ರೀತಿಯ ಅನುಮೋದನೆ ನೀಡಲಾಗಿದೆ. ಈ ಮೂಲಕ ಚೀನಾ ಹಾಗೂ ಭಾರತ ಮೂಲದ ಲಸಿಕೆ ಪಡೆದುಕೊಂಡ ಯಾವುದೇ ರಾಷ್ಟ್ರದ ನಾಗರಿಕರಿಗೆ ಇನ್ನು ಮುಂದೆ ಕೆನಡಾ ಪ್ರವೇಶ ಮತ್ತಷ್ಟು ಸುಗಮವಾಗಲಿದೆ. ಅದರಲ್ಲೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಕೆನಡಾದಲ್ಲಿ ನೆಲೆಸಿದ್ದು, ಇಂದಿನಿಂದ ಇವರ ಮೊಗದಲ್ಲಿ ಕೂಡ ಸಂತಸ ನೆಲೆಸಿದೆ. ಅದೂ ಅಲ್ಲದೆ ಕೆಲಸದ ನಿಮಿತ್ತ ಕೆನಡಾ ತೆರಳುವವರು ಕೂಡ ಯಾವುದೇ ಸಂಕಷ್ಟ ಇಲ್ಲದೆ ಪ್ರಯಾಣಿಸಬಹುದಾಗಿದೆ. ಕೆನಡಾ ಸರ್ಕಾರದ ಪ್ರಕಾರ ಪೂರ್ಣ ವ್ಯಾಕ್ಸಿನ್ ಪಡೆದ ಪ್ರಯಾಣಿಕನೆಂದು ಖಾತ್ರಿಪಡಿಸಲು ಸರ್ಕಾರ ನಿಗದಿಪಡಿಸಿದ ಯಾವುದೇ ವ್ಯಾಕ್ಸಿನ್‌ಗಳ ಎರಡೂ ಡೋಸ್‌ಗಳನ್ನು ಪಡೆದುಕೊಂಡಿರಬೇಕು. ಅಥವಾ ಜಾನ್ಸನ್ ಆಂಡ್ ಜಾನ್ಸನ್ ಕಂಪೆನಿಯ ಕನಿಷ್ಠಪಕ್ಷ ಒಂದು ಡೋಸ್ ಆದರೂ ಪಡೆದುಕೊಂಡಿರಬೇಕಿದೆ.