ಕೋವ್ಯಾಕ್ಸಿನ್ ಮಕ್ಕಳ ಮೇಲೆ ಪ್ರಯೋಗ

ನವದೆಹಲಿ, ಜೂ.೭- ಬಿಹಾರದ ಪಾಟ್ನಾದಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್‌ನಲ್ಲಿ ೨ ರಿಂದ ೧೮ ವರ್ಷ ವಯೋಮಾನದ ಮಕ್ಕಳ ಮೇಲೆ ದೇಸೀಯ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಪ್ರಯೋಗ ಮಾಡಿದ ನಡುವೆಯೇ ಇದೀಗ ದೆಹಲಿಯ ಏಮ್ಸ್‌ನಲ್ಲಿ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ.
ಭಾರತೀಯ ಔಷಧ ಮಹಾನಿಯಂತ್ರಕ-ಡಿಸಿಜಿಐ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಅದರ ಪ್ರಯೋಗ ಆರಂಭವಾಗಿದೆ.
ಪ್ರಾಯೋಗಿಕವಾಗಿ ಮಕ್ಕಳ ಮೇಲೆ ಲಸಿಕೆಯನ್ನು ನೀಡಲು ನಿರ್ಧರಿಸಲಾಗಿದ್ದು ಅದರ ಫಲಿತಾಂಶವನ್ನು ಆಧರಿಸಿ ಮುಂದಿನ ದಿನಗಳಲ್ಲಿ ಮಕ್ಕಳ ಮೇಲೆ ನೀಡಬೇಕೋ, ಬೇಡವೋ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ದೇಶೀಯ ಲಸಿಕೆ ಕೋವ್ಯಾಕ್ಸಿನ್ ಅನ್ನು ಮೇ ತಿಂಗಳ ೧೧ ರಂದು ಬಿಹಾರದ ಪಾಠದಲ್ಲಿರುವ ಅಖಿಲ ಭಾರತೀಯ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿತ್ತು.
ಆರರಿಂದ ಹನ್ನೆರಡು ವರ್ಷ ಮತ್ತು ಎರಡರಿಂದ ಆರು ವರ್ಷ ಮತ್ತು ೧೨ ರಿಂದ ೧೮ ವರ್ಷ ಮೂರು ಹಂತಗಳಲ್ಲಿ ಮಕ್ಕಳ ತಂಡಗಳನ್ನಾಗಿ ರಚಿಸಿ ಅವರ ಮೇಲೆ ಲಸಿಕೆಯನ್ನು ಪ್ರಯೋಗ ಮಾಡಲಾಗಿತ್ತು ಎಂದು ಪಾಟ್ನಾದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ದೇಶಕ್ಕೆ ಡಾ. ಪ್ರಭಾತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಲಸಿಕೆ ಪ್ರಯೋಗ ಸಂಬಂಧ ೫೪ ಮಕ್ಕಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ೧೨ ರಿಂದ ೧೮ ವರ್ಷದ ೧೬ ಮಕ್ಕಳು ಕೂಡ
ಇದರಲ್ಲಿ ಪಾಲ್ಗೊಂಡಿದ್ದರು.
ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನ ಅವರ ಆರೋಗ್ಯ ತಪಾಸಣೆಯನ್ನು ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸದ್ಯ ೧೮ ವರ್ಷ ವಯೋಮಾನ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.