ಕೋವೀಡ್-19 ಕುರಿತು ಮುಖ್ಯಮಂತ್ರಿಗಳಿಂದ ವಿಡಿಯೋ ಸಂವಾದ:ವೈದ್ಯರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ, 3-4 ದಿನದಲ್ಲಿ ಅಶಾ ಕಾರ್ಯರ್ತೆಯರಿಗೆ ವೇತನ ಪಾವತಿ

ಕಲಬುರಗಿ,ಮೇ.29:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಕಲಬುರಗಿ, ಮೈಸೂರು, ಹಾಸನ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್-19 ಕುರಿತು ವಿಡಿಯೋ ಸಂವಾದ ಮೂಲಕ ಸಭೆ ನಡೆಸಿದರು.
ಜಿಲ್ಲಾವಾರು ಪ್ರತ್ಯೇಕವಾಗಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯದಲ್ಲಿನ ವೈದ್ಯರ ಕೊರತೆ ನೀಗಿಸಲು ಈಗಾಗಲೆ 1700ಕ್ಕೂ ಹೆಚ್ಚು ವೈದ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಶೀಘ್ರ ಸಮಸ್ಯೆ ಬಗೆಹರಿಯಲಿದೆ. ಇದರ ಜೊತೆಗೆ ಸ್ಟಾಫ್ ನರ್ಸ್ ಮತ್ತು ಗ್ರೂಪ್ ‘ಡಿ’ ಸಿಬ್ಬಂದಿಗಳ ನೇಮಕಕ್ಕೂ ಕ್ರಮ ವಹಿಸಿದೆ. ಇನ್ನು ಅಶಾ ಕಾರ್ಯಕರ್ತೆಯರಿಗೆ ವೇತನ ಪಾವತಿಗೆ ಅನುದಾನ ಈಗಾಗಲೆ ಬಿಡುಗಡೆ ಮಾಡಿದ್ದು, 3-4 ದಿನದಲ್ಲಿ ವೇತನ ಅವರ ಕೈ ಸೇರಲಿದೆ ಎಂದರು.
ಕೋವಿಡ್ ಎರಡನೇ ಅಲೆ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದ್ದು, ಸಮಾಧಾನದ ಸಂಗತಿಯಾಗಿದೆ. ಸೋಂಕು ಇಳಿಕೆಯಾಗಿದೆ ಅಂತ ಮೈ ಮರೆತು ಕೂಡುವ ಸಮಯ ಇದಲ್ಲ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗಿ ಕಾಣುತ್ತಿದ್ದು, ಇಲ್ಲಿ ಹೆಚ್ಚು ಗಮನಹರಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಸೋಂಕಿತರನ್ನು ಮನವೊಲಿಸಿ ಕಡ್ಡಾಯವಾಗಿ ಐಸೋಲೇಷನ್ ಸೆಂಟರ್‍ಗೆ ಕರೆತರಬೇಕು. ಇಲ್ಲಿ ಸೋಂಕು ನಿಯಂತ್ರಣಕ್ಕೆ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದ ಮುಖ್ಯಮಂತ್ರಿಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಮ್ಲಜನಕ, ಮಾನವ ಸಂಪನ್ಮೂಲ ಸಂಪರ್ಕ ಬಳಕೆಯಾಗಬೇಕು ಎಂದರು.
ಡಿ.ಎಂ.ಎಫ್. ನಿಧಿ ಬಳಕೆಗೆ ಸಿ.ಎಂ. ತಾತ್ವಿಕ ಒಪ್ಪಿಗೆ: ಕಲಬುರಗಿಯಿಂದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ರೆಮೆಡಿಸಿವಿರ್ ಇಂಜೆಕ್ಷನ್ ಕೊರತೆಯಿಲ್ಲ. ಜಿಲ್ಲೆಯಲ್ಲಿ ಡಿ.ಎಂ.ಎಫ್. ನಿಧಿ 175 ಕೋಟಿ ರೂ.ಗಳಿದ್ದು, ಇದರಲ್ಲಿ ಶೇ.33ರಷ್ಟು ಅನುದಾನ ಬಳಕೆಗೆ ಅವಕಾಶವಿರುವುದರಿಂದ ಜಿಲ್ಲೆಗೆ ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪನೆ ಮತ್ತು ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಅನುಮತಿ ನೀಡಬೇಕು ಎಂದು ಕೋರಿಕೊಂಡಾಗ ಸಿ.ಎಂ. ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದರು.
20 ವರ್ಷದಿಂದ ಪಾಳುಬಿದಿದ್ದ ಶಹಾಬಾದ ಇ.ಎಸ್.ಐ.ಸಿ. ಆಸ್ಪತ್ರೆ ನವೀಕರಣ ಕಾರ್ಯ ನಡೆಯುತ್ತಿದ್ದು, ಒಂದು ತಿಂಗಳೊಳಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುತ್ತಿದೆ. ಇದನ್ನು ಇ.ಎಸ್.ಐ.ಸಿ. ಅಥವಾ ಆರೋಗ್ಯ ಇಲಾಖೆಯ ವಶಕ್ಕೆ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಿ.ಎಂ. ಅವರಲ್ಲಿ ಮುರುಗೇಶ ನಿರಾಣಿ ಕೋರಿಕೊಂಡರು.
ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿ ಕೋವಿಡ್ ಲಾಕ್ ಡೌನ್ ಕಾರಣ ಹಳ್ಳಿಗಳಲ್ಲಿ ಜನರು ಕೆಲಸವಿಲ್ಲದೆ ಮನೆಯಲ್ಲಿದ್ದು, ಇವರು ತಮ್ಮ ಹೊಲದಲ್ಲಿ ಹೋಗಿ ಕೆಲಸ ಮಾಡಲು 24 ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು ಮತ್ತು ನರೇಗಾ ಕೂಲಿ ದಿನ 150 ರಿಂದ 200 ದಿನಕ್ಕೆ ಹೆಚ್ಚಿಸಬೇಕು. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಜಿಲ್ಲೆಗೆ ಹೆಚ್ಚಿನ ಇಂಜೆಕ್ಷನ್ ಪೂರೈಸಬೇಕು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ ಈ ಭಾಗದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿದ್ದರಿಂದ ಮಂಡಳಿ ತನ್ನ ವ್ಯಾಪ್ತಿಯ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಸುಧಾರಣೆಗೆ ಅಗತ್ಯ ನೆರವು ನೀಡುತ್ತಿದೆ ಎಂದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಸಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಮಾತನಾಡಿ ಜಿಲ್ಲೆಯ ಪ್ರತಿ ತಾಲೂಕಾ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸಿ.ಎಂ. ಅವರಲ್ಲಿ ಕೋರಿಕೊಂಡರು.
ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ ಹಿಂದುಳಿದ ಪ್ರದೇಶ ಇದಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಹೋಂ ಐಸೋಲೇಷನ್ ತೆಗೆದು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ರೋಗಿಯನ್ನು ಸ್ಥಳಾಂತರಿಸಬೇಕು. ಮೂರನೇ ಅಲೆಗೆ ಈಗಲೇ ಸಿದ್ಧತೆ ಕೈಗೊಂಡು ಜಿಲ್ಲೆಯಲ್ಲಿ ಮಕ್ಕಳ ಐ.ಸಿ.ಯೂ. ವಾರ್ಡ್ ಸ್ಥಾಪಿಸಬೇಕು. ತಮ್ಮ ಕ್ಷೇತ್ರ ಚಿತ್ತಾಪೂರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಿದಲ್ಲಿ 150 ಹಾಸಿಗೆ ಕೋವಿಡ್ ಆಸ್ಪತ್ರೆ ಮಾಡಬಹುದಾಗಿದ್ದು, ಇದರಿಂದ ಜಿಲ್ಲಾ ಆಸ್ಪತ್ರೆ ಮೇಲಿನ ಹೊರೆ ತಗ್ಗಿಸಬಹುದಾಗಿದೆ ಎಂದರು.
ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಆಸ್ಪತ್ರೆಗಳನ್ನು ಉತ್ತಮ ವೈದ್ಯಕೀಯ ಉಪಕರಣ ಮತ್ತು ಮಾನವ ಸಂಪನ್ಮೂಲದೊಂದಿಗೆ ಉನ್ನತ್ತಿಕರಿಸಿದ್ದಲ್ಲಿ ಇಂತಹ ಸಾಂಕ್ರಾಮಿಕ ಪಿಡುಗನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.
ಆಳಂದ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಆಳಂದ ತಾಲೂಕಾ ಆಸ್ಪತ್ರೆ 40 ಹಾಸಿಗೆಯ ಸಾಮಥ್ರ್ಯವಿದ್ದು, ಹಾಸಿಗೆ ಸಂಖ್ಯೆ ಹೆಚ್ಚಿಸಬೇಕು. ಇಲ್ಲಿ ಆಕ್ಸಿಜನ್ ಜನರೇಷನ್ ಪ್ಲ್ಯಾಂಟ್ ಸ್ಥಾಪಿಸಬೇಕು ಮತ್ತು ಇರುವ ವೆಂಟಿಲೇರ್ ಬಳಕೆಗೆ ಸೂಕ್ತ ವೈದ್ಯರು ಮತ್ತು ತಂತ್ರಜ್ಞರನ್ನು ನಿಯೋಜಿಸಬೇಕು ಎಂದರು.
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರು ಮಾತನಾಡಿ ಕ್ಷೇತ್ರದಲ್ಲಿ 11 ಪಿ.ಹೆಚ್.ಸಿ. ಮತ್ತು 2 ಸಮುದಾಯ ಕೇಂದ್ರಗಳಿದ್ದು, ವೈದ್ಯ ಸಿಬ್ಬಂದಿ ಕೊರತೆ ಇದೆ. ಬರುವ ದಿನದಲ್ಲಿ ಇದನ್ನು ಭರ್ತಿ ಮಾಡಬೇಕು ಎಂದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀವು ಮತ್ತು ನಿಮ್ಮ ಇಡೀ ಕುಟುಂಬ ಇತ್ತೀಚೆಗೆ ಕೋವಿಡ್ ಸೋಂಕಿಗೆ ಒಳಗಾಗಿದೀರಲ್ವಾ ಎಂದು ಕೇಳಿ ಅವರ ಆರೋಗ್ಯ ವಿಚಾರಿಸಿದರು.
ಜೇವರ್ಗಿ ಶಾಸಕ ಡಾ. ಅಜಯ ಸಿಂಗ್ ಮಾತನಾಡಿ 3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ತಮ್ಮ ಕ್ಷೇತ್ರದ ತಾಲೂಕಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ಗಳಿದ್ದು, ಇದನ್ನು ಬಳಸುವವರು ಇಲ್ಲ. ಹೀಗಾಗಿ ಕೂಡಲೆ ಇದಕ್ಕೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಜೇವರ್ಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪಿಸಬೇಕು ಎಂದ ಅವರು ಆದಷ್ಟು ಬೇಗ ಜಿಲ್ಲೆಯಾದ್ಯಂತ ಕೋವಿಡ್ ಲಸಿಕೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡರು.
ವಿಧಾನ ಪರಿಷತ್ತಿನ ಶಾಸಕ ಶಶೀಲ ಜಿ. ನಮೋಶಿ ಅವರು ಮಾತನಾಡಿ ಜೂನ್ 7ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಈ ಮಧ್ಯೆ ಜೂನ್ 1 ರಿಂದ ಪ್ರೌಢ ಶಾಲೆ ಆರಂಭಕ್ಕೆ ಸೂಚನೆ ನೀಡಿದ್ದು, ಇದನ್ನು ಮರುಪರಿಶೀಲಿಸಬೇಕು ಎಂದರು.
ಕಲಬುರಗಿ ದಕ್ಷಿಣ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ತಿನ ಶಾಸಕ ಸುನೀಲ ವಲ್ಯಾಪುರೆ ಅವರು ಸಹ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀμï ಶಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ಇ.ಎಸ್.ಐ.ಸಿ. ಡೀನ್ ಡಾ. ಇವಾನೋ ಲೊಬೋ, ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕರ, ಸಹಾಯಕ ಔಷಧ ನಿಯಂತ್ರಕ ಡಾ.ಗೋಪಾಲ ಭಂಡಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.