ಕೋವಿ ಶೀಲ್ಡ್ ರವಾನೆ 2 ದಿನ ವಿಳಂಬ

ಪುಣೆ,ಜ.೯- ಮಾರಕ ಕೊರೊನಾ ಸೋಂಕಿಗೆ ಪುಣೆಯ ಸೀರಂ ಸಂಸ್ಥೆ ಅಭಿವೃದ್ಧಿಪಡಿಸಲಾಗಿರುವ ಕೋವಿ ಶೀಲ್ಡ್ ಲಸಿಕೆ ಡೋಸ್‌ಗಳು ವಿಮಾನದ ಮೂಲಕ ಸರಬರಾಜಗಲು ಎರಡು ದಿನ ವಿಳಂಬವಾಗಲಿದೆ.
ಮೂಲಗಳ ಪ್ರಕಾರ ಸೋಮವಾರ ಕೋವಿ ಶೀಲ್ಡ್ ಲಸಿಕೆಗಳು ಲಭ್ಯವಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಜತೆ ದರ ಏರಿಕೆ ವಿಚಾರದಲ್ಲಿ ಸಂಧಾನ ಪ್ರಕ್ರಿಯೆ ವಿಳಂಬದಿಂದಾಗಿ ಲಸಿಕೆ ಸರಬರಾಜಾಗುವುದು ತಡವಾಗಲಿದೆ ಎಂಬ ವರದಿಗಳನ್ನು ಸೀರಂ ಸಂಸ್ಥೆ ತಳ್ಳಿ ಹಾಕಿದೆ.
ಈ ಮೊದಲು ಲಸಿಕೆ ಗುರುವಾರ ಅಥವಾ ಶುಕ್ರವಾರ ಸರಬರಾಜಾಗುವ ನಿರೀಕ್ಷೆ ಇತ್ತು. ಆದರೆ ಈಗ ೨ ದಿನಗಳು ವಿಳಂಬವಾಗಲಿದೆ.
ಲಸಿಕೆ ಸರಬರಾಜು ಮಾಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಪ್ರಸ್ತುತ ಸರಕು ಸಾಗಾಣಿಕಾ ವಿಮಾನದ ಮೂಲಕ ೧೫೦ಕ್ಕೂ ಹೆಚ್ಚು ಟನ್‌ಗಳಷ್ಟು ಒಂದೇ ದಿನ ಸರಬರಾಜು ಮಾಡಲು ಸಂಪೂರ್ಣವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪುಣೆ ವಿಮಾನ ನಿಲ್ದಾಣದ ನಿರ್ದೇಶಕ ಕುಲ್‌ದೀಪ್ ಸಿಂಗ್ ತಿಳಿಸಿದ್ದಾರೆ.
ಲಸಿಕೆ ಸರಬರಾಜು ಮಾಡುವುದನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ತಮ್ಮ ಬಳಿಹೆಚ್ಚಿನ ಮಾಹಿತಿ ಇಲ್ಲವೆಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಸೀರಂ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅದರ್ ಪೂನಾವಾಲಾ ಸ್ಪಷ್ಟೀಕರಣ ನೀಡಿ ದರ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆಗಳು ನಡೆದಿಲ್ಲ.
ಕೆಲವೇ ದಿನಗಳಲ್ಲಿ ಲಸಿಕೆ ಸರಜರಾಜು ಮಾಡಲಾಗುತ್ತದೆ. ಸರಬರಾಜು ಮಾಡುವ ಮುನ್ನ ಕೆಲವೊಂದು ಪ್ರಕ್ರಿಯೆಗಳು ಬಾಕಿ ಉಳಿದಿರುವ ಕಾರಣ ವಿಳಂಬವಾಗುತ್ತಿದೆ ಎಂದರು.
ಕೋವಿ ಶೀಲ್ಡ್ ಲಸಿಕೆಯನ್ನು ಮೊದಲ ೧೦೦ ದಶಲಕ್ಷ ಡೋಸ್‌ಗಳಿಗೆ ೨೦೦ ರೂ.ಗಳ ಪ್ರತಿ ಡೋಸ್‌ಗೆ ನಿಗದಿ ಮಾಡಲಾಗಿದೆ. ಆದರೆ, ಇದು ಮಾರುಕಟ್ಟೆಯಲ್ಲಿ ಪ್ರತಿಯೊಂದು ಡೋಸ್‌ಗೆ ೧ ಸಾವಿರ ರೂ. ನಿಗದಿಪಡಿಸಿದೆ.
ಪುಣೆಯ ಮಂಜಳಿ ಘಟಕದಲ್ಲಿ ಪ್ರಸ್ತುತ ೫೦ ದಶಲಕ್ಷಕ್ಕೂ ಹೆಚ್ಚು ಕೊರೊನಾ ಲಸಿಕೆ ಡೋಸ್‌ಗಳು ಸಿದ್ಧವಾಗಿವೆ. ಈ ಲಸಿಕೆಗಳನ್ನು ವಿಮಾನಗಳ ಮೂಲಕ ಸರಬರಾಜು ಮಾಡಲು ಸರ್ಕಾರದ ಆದೇಶಕ್ಕೆ ಕಾಯಲಾಗುತ್ತದೆ.
ಸೋಮವಾರ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ವೀಡಿಯೋ ಸಂವಾದ ನಡೆಸಲಿದ್ದು, ಕೊರೊನಾ ಸೋಂಕಿನ ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಇದಾದ ಬಳಿಕ ಲಸಿಕೆ ವಿತರಿಸುವ ದಿನಾಂಕವನ್ನು ಪ್ರಧಾನಿ ಮೋದಿ ಅವರು ಪ್ರಕಟಿಸುವ ಸಾಧ್ಯತೆ ಇದೆ.