ಕೋವಿಶೀಲ್ಡ್ 200 , ಕೋವಾಕ್ಸಿನ್ 295 ರೂ. ಗೆ ಪ್ರತಿ ಡೋಸ್ ಲಸಿಕೆ ಖರೀದಿ

ನವದೆಹಲಿ, ಜ.12- “ಕೋವಿಶೀಲ್ಡ್” ಲಸಿಕೆ ಪ್ರತಿ ಡೋಸ್ ಗೆ 200 ರೂ ಮತ್ತು “ಕೋವಾಕ್ಸಿನ್” ಲಸಿಕೆ 295 ರೂ ಗೆ ಪ್ರತಿ ಡೋಸ್ ಕೊರೊನಾ ಲಸಿಕೆ ಪಡೆಯಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಭಾರತೀಯ ಸೆರಂ ಸಂಸ್ಥೆಯಿಂದ ಕೋವಿಶೀಲ್ಡ್ ಲಸಿಕೆಯನ್ನು ಪ್ರತಿ ಡೋಸ್‍ಗೆ 200 ರೂಪಾಯಿಯಂತೆ 110 ಲಕ್ಷ ಡೋಸ್ ಖರೀದಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿಂದು ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಬಯೋಟೆಕ್‍ನಿಂದ 55 ಲಕ್ಷ ಡೋಸ್ ಖರೀದಿಸಲು ಮುಂದಾಗಿದ್ದು, ಈ ಪೈಕಿ 16.5 ಲಕ್ಷ ಡೋಸ್ ಲಸಿಕೆಯನ್ನು ಸರ್ಕಾರಕ್ಕೆ ಉಚಿತವಾಗಿ ನೀಡಲಿದೆ ಎಂದರು.

ಭಾರತ್ ಬಯೋಟೆಕ್ 38.5 ಲಕ್ಷ ಡೋಸ್ ಲಸಿಕೆಗೆ ಪ್ರತಿ ಡೋಸ್‍ಗೆ 295 ರೂಪಾಯಿ ವೆಚ್ಚ ತಗುಲಲಿದೆ. ಸರಾಸರಿ ಕೋವಾಕ್ಸಿನ್ ಲಸಿಕೆಗೆ 206 ರೂಪಾಯಿ ಪ್ರತಿ ಡೋಸ್‍ಗೆ ತಗುಲಲಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ರಾಜ್ಯಗಳಿಗೆ ರವಾನೆ:

ದೇಶದಲ್ಲಿ ಈ ತಿಂಗಳ 16ರಿಂದ ಬೃಹತ್ ಲಸಿಕೆ ವಿತರಣೆ ನಡೆಯಲಿದೆ.ಗುರುವಾರದ ಒಳಗೆ ಎಲ್ಲಾ ರಾಜ್ಯಗಳಿಗೆ ಲಸಿಕೆ ಪೂರೈಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಪ್ರತಿನಿತ್ಯ ದಾಖಲಾಗುವ ಕೋರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸದ್ಯ 2 ಲಕ್ಷ 16 ಸಾವಿರದ 558 ಸಕ್ರಿಯ ಪ್ರಕರಣಗಳಿವೆ .ಇಂಗ್ಲೆಂಡ್, ಬ್ರೆಜಿಲ್, ರಷ್ಯಾ, ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಭಾರತದಲ್ಲಿ ಸೋಂಕು ಇಳಿಕೆಯಾಗುತ್ತಿದೆ ಎಂದರು.

ಕಳೆದ 24 ಗಂಟೆಗಳಲ್ಲಿ 12 ಸಾವಿರದ 584 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶದ ಒಟ್ಟಾರೆ ಸೋಂಕಿನಲ್ಲಿ ಶೇಕಡ 2ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.

2 ರಾಜ್ಯದಲ್ಲಿ ಹೆಚ್ಚಿನ ಪ್ರಕರಣ

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡ 54ರಷ್ಟು ಇದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

ದೇಶದಲ್ಲಿ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಈ ಎರಡೂ ಲಸಿಕೆಗಳಲ್ಲದೆ, ಇನ್ನೂ 4 ಲಸಿಕೆಗಳು ದೇಶದಲ್ಲಿ ಶೀಘ್ರವೇ ಸಿಗಲಿವೆ ಎಂದು ಹೇಳಿದರು.