ಕೋವಿಶೀಲ್ಡ್ ಲಸಿಕೆ ಬೆಲೆ ಇಳಿಕೆ

ನವದೆಹಲಿ, ಏ. ೨೯: ಕೋವಿಡ್ ಲಸಿಕೆ ದರ ನಿಗದಿ ಬಗ್ಗೆ ದೇಶದಲ್ಲಿ ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ- ಎಸ್‌ಐಐ ಮಹತ್ವದ ನಿರ್ಧಾರವೊಂದನ್ನು ಹೊರಹಾಕಿದೆ.

ಎಸ್‌ಐಐಯು, ಎಲ್ಲಾ ರಾಜ್ಯಗಳಿಗೆ ಕೋವಿಶೀಲ್ಡ್ ಲಸಿಕೆ ಬೆಲೆಯನ್ನು ಶೇಕಡಾ ೨೫ರಷ್ಟು ಕಡಿತಗೊಳಿಸಿದೆ. ಈ ಮೂಲಕ ಲಸಿಕೆಯ ಬೆಲೆ ೪೦೦ ರೂ.ಗಳಿಂದ ೩೦೦ ರೂ.ಗೆ ತಗ್ಗಿದೆ.

ಎಸ್‌ಐಐನ ಸಿಇಒ ಆದರ್ ಪೂನವಾಲಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಜನರ ಹಿತದೃಷ್ಟಿಯಿಂದ, ತಾವು ರಾಜ್ಯಗಳಿಗೆ ಒಂದು ಡೋಸ್ ಬೆಲೆ ೪೦೦ ರಿಂದ ೩೦೦ ರೂ.ಗಳಿಗೆ ಇಳಿಸುವುದಾಗಿ ಹೇಳಿದ್ದಾರೆ. ಅವರು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

ಲಸಿಕೆ ದರದ ಕುರಿತು ಅನೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಹಿಂದೆ ಭಾರತ್ ಬಯೋಟೆಕ್ ಮತ್ತು ಎಸ್‌ಐಸಿಐ ಗೆ ಲಸಿಕೆಗಳ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರ ಕೇಳಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ ಎಂದು ಹೇಳಲಾಗಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಅನ್ನು ಈ ಹಿಂದೆ ರಾಜ್ಯಗಳಿಗೆ ೪೦೦ ರೂ.ಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ೬೦೦ ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿತ್ತು. ಜೊತೆಗೆ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ ೧೫೦ ರೂಪಾಯಿಗೆ ಮಾರಾಟ ಮಾಡುತ್ತಿದೆ.