ಕೋವಿಶೀಲ್ಡ್ ಲಸಿಕೆಗೆ 200 ರೂ ದರ ನಿಗದಿ

ನವದೆಹಲಿ, ಜ 11- ಕೋವಿಡ್-19 ಲಸಿಕೆ ಕೋವಿಶೀಲ್ಡ್ ಗಾಗಿ ಕೇಂದ್ರ ಸರ್ಕಾರದಿಂದ ಖರೀದಿ ಆದೇಶವನ್ನು ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಪಡೆದುಕೊಂಡಿದೆ. ಪ್ರತಿ ಸೀಸೆಗೆ 200 ರೂಪಾಯಿಯಂತೆ ಲಸಿಕೆ ದೊರೆಯಲಿದೆ.

ಜನವರಿ 16 ರಿಂದ ಲಸಿಕೆ ಅಭಿಅಯಾನ ಆರಂಭವಾಗುವ ನಿರೀಕ್ಷೆಯಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ‌ ಅನುಮತಿ ನೀಡಿದೆ.

ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಪುಣೆ ಮೂಲದ ಸೆರಮ್ ಔಷಧಿ ತಯಾರಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಹೊರ ಬರುವ ನಿರೀಕ್ಷೆಯಿದೆ.

ಪ್ರತಿವಾರ ಕೆಲ ದಶಲಕ್ಷ ಡೋಸ್ ನಷ್ಟು ಕೋವಿ ಶೀಲ್ಡ್ ನ್ನು ಪೂರೈಸಲಾಗುತ್ತದೆ. ಪ್ರಾಥಮಿಕವಾಗಿ 11 ದಶಲಕ್ಚ ಡೋಸ್ ಲಸಿಕೆ ಪೂರೈಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಜನವರಿ 16ರಿಂದ ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ವಾರಾಂತ್ಯದಲ್ಲಿ ಹೇಳಿಕೆ ನೀಡಿತ್ತು.

ಅಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಅಸ್ಟ್ರಾ ಜೆನಿಕಾ ಹಾಗೂ ಭಾರತ್ ಬಯೋಟೆಕ್ ಸ್ವದೇಶಿ ಔಷಧ ತಯಾರಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯನ್ನು ತುರ್ತಾಗಿ ಬಳಸಬಹುದು ಎಂದು ಈ ತಿಂಗಳ ಆರಂಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ-ಐಸಿಎಂಆರ್ ಸೂಚನೆ ನೀಡಿತ್ತು.