ಕೋವಿಶೀಲ್ಡ್ ಪಡೆದಿದ್ದವರಿಗೆ ಕೋವ್ಯಾಕ್ಸಿನ್ ನೀಡಿ ಎಡವಟ್ಟು

ಸಿದ್ಧಾರ್ಥನಗರ(ಉತ್ತರಪ್ರದೇಶ),ಮೇ.26- ಮೊದಲ ಡೋಸ್ ಕೋವಿಶೀಲ್ಡ್ ಪಡೆದಿದ್ದ 20ಮಂದಿ ಗ್ರಾಮಸ್ಥರಿಗೆ ಕೋವ್ಯಾಕ್ಸಿನ್ ನೀಡಿ ಆರೋಗ್ಯ ಕಾರ್ಯಕರ್ತರು ಅಚಾತುರ್ಯ ಎಸಗಿರುವ ಘಟನೆ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದ್ದು ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.
ಕೋವಿಶೀಲ್ಡ್ ಪಡೆದಿದ್ದ 20ಮಂದಿ ಗ್ರಾಮಸ್ಥರಿಗೆ ಕೋವ್ಯಾಕ್ಸಿನ್ ನೀಡಿ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ತಿಳಿಸಿದ್ದಾರೆ.
ಲಸಿಕೆ ವ್ಯತ್ಯಾಸದಿಂದ ಹಳ್ಳಿಗರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಿಲ್ಲ. ಆರೋಗ್ಯ ಇಲಾಖೆಯ ತಂಡ ಈಗಾಗಲೇ ಅವರನ್ನು ಭೇಟಿ ಮಾಡಿದೆ ಎಂದಿದ್ದಾರೆ.
ಮೊದಲ ಮತ್ತು ಎರಡನೆಯ ಡೋಸ್ ವಿಭಿನ್ನ ಲಸಿಕೆಗಳನ್ನು ಪಡೆದಿದ್ದಾರೆ ಎಂದು ಗ್ರಾಮಸ್ಥ ರಾಮ್ ಸೂರತ್ ಅವರು, ಆರೋಗ್ಯ ಕಾರ್ಯಕರ್ತರ ಗಮನಕ್ಕೆ ತಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಆರೋಗ್ಯ ಕಾರ್ಯಕರ್ತರ ಕಡೆಯಿಂದ ಆಗಿರುವ ತಪ್ಪನ್ನು ಒಪ್ಪಿಕೊಂಡ ಸಿಎಂಒ, 20 ಜನರಿಗೆ ಮೊದಲ ಮತ್ತು ಎರಡನೇ ಡೋಸ್ ವಿಭಿನ್ನ ಲಸಿಕೆಗಳನ್ನು ನೀಡಲಾಗಿದೆ. ವೈದ್ಯಕೀಯ ತಂಡಗಳು ಅವರ ಮೇಲೆ ನಿಗಾ ವಹಿಸುತ್ತಿವೆ ಎಂದು ಹೇಳಿದ್ದಾರೆ.
ವಿಭಿನ್ನ ಲಸಿಕೆಗಳನ್ನು ಪಡೆದ ಜನರು ಒತ್ತಡದಲ್ಲಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರಿಗೂ ಇದುವರೆಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.