ಕೋವಿಡ ನಿಯಮ ಉಲ್ಲಂಘಿಸಿ ನೂರಾರು ಜನರಿಗೆ ಕಿಟ್ ವಿತರಣೆ: ಕ್ರಮಕ್ಕೆ ಯಾಕಾಪೂರ ಆಗ್ರಹ

ಕಲಬುರಗಿ,ಜೂ.2- ಜಿಲ್ಲೆಯ ಚಿಂಚೋಳಿ ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ನೂರಾರು ಜನರನ್ನು ಒಂದೇಡೆ ಸೇರಿಸಿ ಕೋವಿಡ ನಿಯಮ ಉಲ್ಲಂಘಿಸಿ ಕಿಟ್‍ವಿತರಣೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವ ತಹಸಿಲ್ದಾರ ಮತ್ತು ಪುರಸಭೆ ಮುಖ್ಯಾಧಿಕಾರಿಯನ್ನು ಸೇವೆಯಿಂದ ಅಮಾನತ್ತು ಗೊಳಿಸುವಂತೆ ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ರಮೇಶ ಯಾಕಾಪೂರ ಅವರು ಒತ್ತಾಯಿಸಿದ್ದಾರೆ.
ಕಳೆದ ಸೋಮುವಾರ ಮೇ.31ರಂದು ಚಿಂಚೋಳಿಯ ಕಲ್ಯಾಣ ಮಂಟಪದಲ್ಲಿ 4-5 ನೂರು ಜನರನ್ನು ಒಟ್ಟಿಗೆ ಸೇರಿಸಿ ಕೋವಿಡ ನಿಯಮ ಉಲ್ಲಂಘಿಸಿ ಶಾಸಕ ಡಾ.ಅವಿನಾಶ ಜಾಧವ ಮತ್ತು ಸಂಸದ ಭಗವಂತ ಖೂಬಾ ನೇತೃತ್ವದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ.
ಲಾಕ್‍ಡೌನ್ ಹಾಗೂ ಕೋವಿಡ ನಿಯಮ ಉಲ್ಲಂಘಿಸಿ ಕೊರೊನಾ ಸೋಂಕು ಹರಡಲು ಕಾರಣವಾಗಿರುವ ಈ ಸಮಾರಂಭ ನಡೆಸಲು ಪರವಾನಿಗೆ ಪಡೆಯಲಾಗಿದೆಯೇ? ಎಂದು ಪ್ರಶ್ನಿಸಿರುವ ಅವರು, ನೂರಾರು ಜನರನ್ನು ಒಟ್ಟಿಗೆ ಸೇರಿಸಿ ಕಿಟ್ ವಿತರಿಸಿರುವುದು ಕೋವಿಡ್ ಮತ್ತು ಲಾಕ್‍ಡೌನ್ ನಿಯಮ ಉಲ್ಲಂಘನೆಯಾಗಿದೆ.
ಜನಸಾಮಾನ್ಯರು ಮತ್ತು ಸಣ್ಣಪುಟ್ಟ ಅಂಗಡಿ ಮುಗ್ಗಟ್ಟುಗಳು ಕೋವಿಡ ನಿಯಮ ಉಲ್ಲಂಘಿಸಿದ್ದಾರೆಂದು ಅವರ ವಿರುದ್ದ ಕ್ರಮ ಕೈಗೊಳ್ಳುವ ಇಲ್ಲಿನ ಅಧಿಕಾರಿಗಳು ಕಲ್ಯಾಣ ಮಂಟಪದಲ್ಲಿ ನಡೆದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ನೂರಾರು ಜನರು ಒಂದೇಡೆ ಸೇರಿರುವುದು ನೋಡಿಯೂ ನೋಡದಂತೆ ಮೌನ ವಹಿಸಿದ್ದೇಕೆ? ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಗೊಳಿಸಬೇಕು ಎಂದು ಜನತಾದಳ ಜಾತ್ಯಾತೀತ ಪಕ್ಷದ ಮುಖಂಡ ಯಾಕಾಪೂರ ಅವರು ಆಗ್ರಹಿಸಿದ್ದಾರೆ.
ಕೋವಿಡ ಎರಡನೆ ಮತ್ತು ಮೂರನೆ ಅಲೆ ಪ್ರಾರಂಭವಾಗುವ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಜನರು ಗುಂಪುಗುಂಪಾಗಿ ಸೇರಲು ಅವಕಾಶ ನೀಡುವ ಮೂಲಕ ಜನರ ಆರೋಗ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಕೋರೊನಾ ಸೋಂಕು ಹರಡಲು ಕಾರಣವಾಗುವ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂದಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.