ಕೋವಿಡ್ 3ನೇ ಅಲೆ ಎದುರಿಸಲು ಸೋಂಕಿತ ಮಕ್ಕಳ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ: ಸಚಿವೆ ಜೊಲ್ಲೆ

ವಿಜಯಪುರ, ಜೂ.10-ಕೋವಿಡ್ 3ನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಬೇಕಾಗುವ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ರೋಗ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ ನಡೆಸಿದ ಅವರು ಕೋವಿಡ 3 ನೇ ಅಲೆ ಅಂಗವಾಗಿ ಹೆಚ್ಚಿನ ಮಕ್ಕಳು ಕೋವಿಡದಿಂದ ಬಾಧಿತವಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾ ಆಸ್ಪತ್ರೆ, ತಾಲೂಕ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಬೆಡ್ ಗಳ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಸಕಲ ಸಿದ್ಧತೆಗಳೊಂದಿಗೆ ಸನ್ನದ್ಧಗೊಳ್ಳುವ ಜೊತೆಗೆ ಯೋಜನೆ ರೂಪಿಸಲು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿಯೂ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎನ್.ಐ.ಸಿ.ಯು-ಪಿ.ಐ.ಸಿ.ಯು ಸೌಲಭ್ಯಗಳೊಂದಿಗೆ ಸಮನ್ವಯ ಸಮಿತಿಯನ್ನು ರೂಪಿಸಿ ಕೋವಿಡ್ ಮಕ್ಕಳ ನಿರ್ವಹಣಾ ಕ್ರಿಯಾ ಯೋಜನೆಯನ್ನು ರೂಪಿಸಿ ಮುಂದಿನ ದಿನಗಳಲ್ಲಿ ಸನ್ನದ್ಧ ಗೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ದಿಂದ ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡ 3 ಮಕ್ಕಳು ಅನಾಥವಾಗಿರುವ ಬಗ್ಗೆ ಗಮನಕ್ಕೆ ಬಂದಿದೆ.ಅಂತಹ ಮಕ್ಕಳ ಪೆÇೀಷಣೆ ಬಗ್ಗೆ ನಿಗಾ ಇಡಬೇಕು. ಇಂತಹ ಮಕ್ಕಳ ಭವಿಷ್ಯಕ್ಕಾಗಿ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಬಾಲ ಸೇವಾ ಯೋಜನೆ ಜಾರಿಗೊಳಿಸಿದ್ದು, ಇದರಡಿಯ ಸೌಲಭ್ಯ ಕಲ್ಪಿಸಬೇಕು. ಅದರಂತೆ ತಂದೆ ಮತ್ತು ತಾಯಿ ಇವರಿಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡ ಜಿಲ್ಲೆಯಲ್ಲಿ 289 ಮಕ್ಕಳ ಬಗ್ಗೆಯೂ ನಿಗಾಇಡಬೇಕು. ಅನಾಥ ರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ,ಕಾನೂನು ಅನುಸಾರ ಯಾರಾದರೂ ದಾನಿಗಳು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭವಿಷ್ಯ ರೂಪಿಸಲು ಮುಂದೆ ಬಂದಲ್ಲಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರ ದಿಂದ ಸಹಕಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಮುಂದಿನದಿನಗಳಲ್ಲಿ ಪಿಡಿಯಾಟ್ರಿಕ್ಸ ಕೋವಿಡ್ ಮಕ್ಕಳ ನಿರ್ವಹಣೆ, ಕೋವಿಡ ಕೇರ್ ಸೆಂಟರ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ತಾಲೂಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಒದಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಮಾತನಾಡಿ ಕೋವಿಡ್ ಮೂರನೇ ಅಲೆ ಎದುರಿಸಲು ಈಗಿನಿಂದಲೇ ಯೋಜನೆ ರೂಪಿಸಬೇಕು. ಡೆತ್ ಆಡಿಟ್ ಗಳನ್ನು ಸರಿಯಾಗಿ ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ಸಂಪರ್ಕದೊಂದಿಗೆ ನಿರ್ವಹಣೆ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಬ್ಲ್ಯಾಕ್ ಫಂಗಸ್ ಪ್ರಕರಣಗಳ ಮತ್ತು ಕೋವಿಡ್ ನಿರ್ವಹಣೆ ಸಮಗ್ರ ಮಾಹಿತಿ ನೀಡಿ,ಮಧುಮೇಹ ರೋಗಿ, ಕೋವಿಡ್ ದಿಂದ ಗುಣಮುಖರಾದ ರೋಗಿಗಳ ಬಗ್ಗೆ ಆರೋಗ್ಯ ವಿಚಾರಣೆ ನಡೆಸಬೇಕು. ಲಸಿಕೆಯಲ್ಲಿ ಪ್ರಗತಿ ಸಾಧಿಸಲು ಸೂಚಿಸಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ರಮೇಶ್ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ್ ಸಾಸನೂರ, ದೇವಾನಂದ ಚೌಹಾಣ್, ಸಾವಯವ ಪ್ರಮಾಣನ ಮತ್ತು ಬೀಜ ನಿಗಮ ಅಧ್ಯಕ್ಷ ವಿಜುಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ, ಹನುಮಂತ ನಿರಾಣಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹಾಗೂ ಇತರರು ಉಪಸ್ಥಿತರಿದ್ದರು.
ನಿರಾಣಿ ಸಂಸ್ಥೆಯಿಂದ ಸ್ಯಾನಿಟೈಸರ್ ಪೂರೈಸಿದ್ದಕ್ಕೆ ಅಭಿನಂದನೆಃ ನಿರಾಣಿ ಸಂಸ್ಥೆಯಿಂದ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ಮತ್ತು ನಗರದ 35 ವಾರ್ಡಗಳ ವ್ಯಾಪ್ತಿಯಲ್ಲಿ ಬಳಸಲು ಕೊಡ ಮಾಡಿದ ಸ್ಯಾನಿಟೈಸರ್ ಗಳನ್ನು ವಿಜಯಪುರ ಜಿಲ್ಲಾಡಳಿತಕ್ಕೆ ಪೂರೈಸಿದ್ದಕ್ಕಾಗಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆಯವರು ಅಭಿನಂದನೆ ಸಲ್ಲಿಸಿದರು.
ನಿರಾಣಿ ಸಂಸ್ಥೆ ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗೆ ಇಂತಹ ಸೇವೆಯನ್ನು ಕಲ್ಪಿಸುತ್ತಿದ್ದು ಕೋವಿಡ್ ದಂತಹ ಪರಿಸ್ಥಿತಿಯಲ್ಲಿ ಇಂತಹ ಸೇವಾಕಾರ್ಯಕ್ಕೆ ಹಾಗೂ ನಿರಾಣಿ ಸಹೋದರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.