ಕೋವಿಡ್ 2ನೇ ಪರಿಹಾರ ಪ್ಯಾಕೇಜ್ ಮೂಗಿಗೆ ತಪ್ಪು ಸವರುವ ತಂತ್ರ: ಎಸ್‍ಯುಸಿಐ ಟೀಕೆ

ಕಲಬುರಗಿ.ಜೂ.04:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಎರಡನೇ ಅಲೆಯ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿ ಮಾಡಿದ್ದು, ಪರಿಹಾರವನ್ನು ಫಲಾನುಭವಿಗಳಿಗೆ ತ್ವರಿತವಾಗಿ ವಿತರಿಸಬೇಕು. ಪ್ಯಾಕೇಜ್ ಮೂಗಿಗೆ ತುಪ್ಪ ಸವರುವ ತಂತ್ರ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ಟೀಕಿಸಿದ್ದಾರೆ.
ರಾಜ್ಯದ ಜನರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ಎರಡನೇ ಕೋವಿಡ್ ಪರಿಹಾರ ಪ್ಯಾಕೇಜು ಘೋಷಿಸಿದ್ದಾರೆ. ಆಶಾ, ಅಂಗನವಾಡಿ, ಮೀನುಗಾರರು, ಅನುದಾನ ರಹಿತ ಶಾಲಾ ಶಿಕ್ಷಕರೂ ಸೇರಿದಂತೆ ವಿವಿಧ ಕೆಲವು ವಿಭಾಗಗಳ ಜನತೆಗೆ ಸಮಾಧಾನಪಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದಾಗ್ಯೂ, ಪರಿಹಾರದ ಪ್ಯಾಕೇಜ್ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟೇ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಎರಡನೇ ಬಾರಿ ಲಾಕ್‍ಡೌನ್ ಘೋಷಿಸಿದ್ದು, ಸರ್ಕಾರ ಕೋವಿಡ್ ಎರಡನೇ ಅಲೆ ಹರಡಲು ಸರ್ಕಾರಗಳ ಬೇಜವಾಬ್ದಾರಿಯೇ ಮುಖ್ಯ ಕಾರಣ. ಹಾಗಿರುವಾಗ ಉದ್ಯೋಗ ಮತ್ತು ಆದಾಯ ಕಳೆದುಕೊಂಡಿರುವ ಜನರ ಜೀವನವನ್ನು ಉಳಿಸುವ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಎಂದು ಜನತೆ ಕೇಳುವುದರಲ್ಲಿ ನ್ಯಾಯ ಇದೆ. ಕೇವಲ 2000, 3000ರೂ.ಗಳ ಮೊತ್ತದಿಂದ ಕುಟುಂಬದ ನಿರ್ವಹಣೆ ಸಾಧ್ಯವೇ? ಇದು ಜನರ ಮೂಗಿಗೆ ತುಪ್ಪ ಸವರುವ ತಂತ್ರವಲ್ಲವೇ? ಅವರು ಪ್ರಶ್ನಿಸಿದ್ದಾರೆ.
ಇಂತಹ ಪರಿಹಾರ ಪ್ಯಾಕೇಜ್‍ಗೆ ಬೇಕಾದ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರವೂ ನೀಡಬೇಕು. ರಾಜ್ಯದ ಪಾಲಿನ ಜಿಎಸ್‍ಟಿ ಬಾಕಿಯನ್ನಾದರೂ ನೀಡುವಂತೆ ರಾಜ್ಯ ಸರ್ಕಾರ ಮತ್ತು ಸಂಸದರು ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಆದಾಯ ಕಳೆದುಕೊಂಡಿರುವ ಗುತ್ತಿಗೆ ನೌಕರರು, ಅಸಂಘಟಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಅತಿಥಿ ಉಪನ್ಯಾಸಕರು, ಸಣ್ಣ ಸ್ವಯಂ ಉದ್ಯೋಗಿಗಳು ಹೀಗೆ ಎಲ್ಲರ ಬದುಕನ್ನು ಉಳಿಸುವ ಬದ್ಧತೆಯನ್ನು ಸರ್ಕಾರ ತೋರಿಸಬೇಕು. ಜೊತೆಗೆ ಈಗಾಗಲೇ ಘೋಷಣೆಯಾದ ಪರಿಹಾರ ಮೊತ್ತ ಫಲಾನುಭವಿಗಳಿಗೆ ಆದಷ್ಟು ಬೇಗನೇ ಸಮರ್ಪಕವಾಗಿ ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.