ಕೋವಿಡ್ 2ನೇ ಅಲೆ ಸಾವಿನ ಪ್ರಮಾಣ ತಗ್ಗಿಸಲು ವಿಶೇಷ ಗಮನ ಹರಿಸಿ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ, ಏ.22-ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಪ್ರಮಾಣ ತಗ್ಗಿಸುವ ದಿಸೆಯಲ್ಲಿ ಸಂಬಂಧಪಟ್ಟ ಆಸ್ಪತ್ರೆಗಳ ವೈದ್ಯರು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೋವಿಡ್-19 ನಿಯಂತ್ರಣ ಕುರಿತು ವಿಡಿಯೋ ಸಂವಾದದ ಮೂಲಕ ಜಿಲ್ಲಾ ಜಾಗೃತಾ ಸಮಿತಿಯ (ಎಕ್ಸಪರ್ಟ್ ಕಮಿಟಿ) ಸಭೆ ನಡೆಸಿ ವಿವಿಧ ಆಸ್ಪತ್ರೆಗಳ ವೈದ್ಯರೊಂದಿಗೆ ಚರ್ಚಿಸಿದ ಅವರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಒದಗಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಹೆಚ್ಚಿನ ಸಾವು ಆಗದಂತೆ ನೋಡಿಕೊಳ್ಳಲು ವಿಶೇಷ ಗಮನ ನೀಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ರೆಮಿಡಿಸಿವರ್ ಲಸಿಕೆಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದರ ಸಮರ್ಪಕ ನಿರ್ವಹಣೆಗಾಗಿ ಡ್ರಗ್ಸ್ ಕಂಟ್ರೋಲರ್, ಡಾ.ಔದ್ರಾಮ್ ಮತ್ತು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅಡತಡೆಗಳನ್ನು ನಿವಾರಿಸಬೇಕು. ಈ ಕುರಿತು ನಿರಂತರ ತಮ್ಮ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಇವುಗಳ ಕೊರತೆ ನೀಗಿಸಲು ಗಮನ ನೀಡಲು ಸೂಚಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿರುವ ಪರಿಸ್ಥಿತಿಯನ್ನು ಅರಿತು ವಾಸ್ತವಾಂಶ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವೆಂಟಿಲೇಟರ್‍ಗಳ ಸಮರ್ಪಕ ನಿರ್ವಹಣೆ ಮಾಡಿಕೊಳ್ಳಬೇಕು. ಐಸಿಯು ನಿರ್ವಹಣಾ ತಂತ್ರಜ್ಞರನ್ನು ಜಿಲ್ಲಾ ಆಸ್ಪತ್ರೆಗೆ ಪಡೆದುಕೊಳ್ಳಬೇಕು. ಅವಶ್ಯಕ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಕಾರದ ಜೊತೆಗೆ ಸಮರ್ಪಕ ಸಿಬ್ಬಂದಿಗಳು ಇರುವಂತೆ ನೋಡಿಕೊಂಡು ಐಸಿಯು ಘಟಕ ನಿರ್ವಹಿಸಲು ಅವರು ಸೂಚನೆ ನೀಡಿದರು.
ಸರ್ಕಾರದ ನಿರ್ದೇಶನದಂತೆ ಗುತ್ತಿಗೆ ಆಧಾರದ ಮೇಲೆ ನರ್ಸ್, ಲ್ಯಾಬ್ ಟೆಕ್ನಿಸಿಯನ್ ಹಾಗೂ ಅವಶ್ಯಕ ಸಿಬ್ಬಂದಿಗಳ ಪಾರದರ್ಶಕ ನೇಮಕಾತಿ ಕುರಿತು ವಿಶೇಷ ಗಮನ ನೀಡಬೇಕು. ಪ್ರತಿದಿನ ಬರುತ್ತಿರುವ ಸುತ್ತೋಲೆಗಳ ಬಗ್ಗೆ ನಿರಂತರ ಗಮನ ಹರಿಸುವ ಜೊತೆಗೆ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ ಅವರು ಕೆಳಮಟ್ಟದ ಸಿಬ್ಬಂದಿಗಳನ್ನು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್, ಡಾ.ಲಕ್ಕಣ್ಣನವರ, ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು.