ಕೋವಿಡ್ 2ನೇ ಅಲೆ ಸಮರ್ಥವಾಗಿ ಎದುರಿಸಲು ಸಾಂಘಿಕ ಹೋರಾಟ ಅಗತ್ಯ:ವಿವಿಧ ಸಮಿತಿಗಳ ಸಭೆಯಲ್ಲಿ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಕರೆ

ಕಲಬುರಗಿ.ಏ.19: ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್-19 ಎರಡನೇ ಅಲೆ ಸೋಂಕು ನಿಯಂತ್ರಣಕ್ಕೆ ಸಾಂಘಿಕ ಹೋರಾಟದ ಅಗತ್ಯವಿದ್ದು, ಎಲ್ಲಾ ಅಧಿಕಾರಿಗಳು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಜೀವಸಂಕುಲಕ್ಕೆ ಮಹಾಮಾರಿಯಾಗಿ ಪರಿಣಮಿಸಿರುವ ಕೋವಿಡ್ ಸೋಂಕನ್ನು ಹಿಮೆಟ್ಟಿಸಲು ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಕರೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಚಿಸಲಾಗಿರುವ ವಿವಿಧ ಸಮಿತಿಗಳ ಜಂಟಿ ಸಭೆ ನಡೆಸಿ ಅವರು ಮಾತನಾಡಿದರು.
ಕೋವಿಡ್-19 ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿರುವ ಕಾರಣ ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈ ಆತಂಕವನ್ನು ದೂರ ಮಾಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ.
ಇದಕ್ಕಾಗಿ ಕಲಬುರಗಿ ನಗರದ 19 ಆಸ್ಪತ್ರೆಗಳು (ಜಿಮ್ಸ್ ಮತ್ತು ಇ.ಎಸ್.ಐ.ಸಿ.) ಸೇರಿದಂತೆ ಜಗತ್ ವೃತ್ತ, ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ, ರೈಲು ನಿಲ್ದಾಣ, ಡಿ.ಸಿ. ಕಚೇರಿ, ಪಾಲಿಕೆ ಕಚೇರಿ ಹೀಗೆ 21 ಸಾರ್ವಜನಿಕ ಸ್ಥಳಗಳು ಸೇರಿದಂತೆ ಒಟ್ಟು 40 “ಹೆಲ್ಪ್ ಡೆಸ್ಕ್” ಮಂಗಳವಾರದಿಂದಲೆ ಕಾರ್ಯನಿರ್ವಹಿಸಲಿವೆ. ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವ ಈ ಸಹಾಯವಾಣಿಯಲ್ಲಿ ಸೋಂಕು ಪತ್ತೆಯಾದ ನಂತರ ಚಿಕಿತ್ಸೆ, ಆಸ್ಪತ್ರೆ ಮತ್ತು ಹಾಸಿಗೆ ಸ್ಥಿತಿಗತಿಗಳ ಮಾಹಿತಿ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದೆ. ಸಹಾಯವಾಣಿಯಲ್ಲಿ ಇಬ್ಬರು ಶಿಕ್ಷಕರು, ಪೆÇಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಇರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ವಿಶೇಷವಾಗಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳ ಬೇಡಿಕೆಯಂತೆ ಔಷಧಿಗಳು ಪೂರೈಸುವಂತಾಗಬೇಕು. ಔಷಧಿ ಮತ್ತು ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್-1 ಕರುಣಾನಿಧಿ ಅವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಕ್ಲಿನಿಕ್‍ಗಳಿಗೆ ಭೇಟಿ ನೀಡಿ ಐ.ಎಲ್.ಐ ಮತ್ತು ತೀವ್ರ ಉಸಿರಾಟದ ಸಮಸ್ಯೆ ಪ್ರಕರಣಗಳನ್ನು ಪತ್ತೆ ಹಚ್ಚಿ ಇಂಥ ಎಲ್ಲಾ ಪ್ರಕರಣಗಳಲ್ಲಿ ಕಡ್ಡಾಯವಾಗಿ ರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು. ಇದರ ಜೊತೆಗೆ ಸೋಂಕಿತರ ಸಂಪರ್ಕದಲ್ಲಿ ಬರುವ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ತಪಾಸಣೆಗೆ ಒಳಪಡಿಸಬೇಕು. ಸಂಗ್ರಹಿಸಿದ ಸ್ಯಾಂಪಲ್‍ಗಳನ್ನು ಕೂಡಲೆ ಪರೀಕ್ಷಿಸಿ ನಿಗಧಿತ ಅವಧಿಯಲ್ಲಿ ಸಾರ್ವಜನಿಕರಿಗೆ ಫಲಿತಾಂಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಸಮಿತಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಲಬುರಗಿ ನಗರದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಪಾಲಿ ಮತ್ತು ಯೂನಾನಿ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್‍ಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಕ್ವಾರಂಟೈನ್ ಸೆಂಟರ್ ಮತ್ತು ಐಸೋಲೇಶನ್ ಸೆಂಟರ್ ಸ್ಥಾಪನೆಗೆ ತಯ್ಯಾರಿ ಮಾಡಿಕೊಂಡು ಅದಕ್ಕೆ ಬೇಕಾದ ಸಿಬ್ಬಂದಿಗಳ ಪೂರೈಕೆಗೆ ಸಿದ್ಧರಿರಬೇಕು. ಕ್ವಾರಂಟೈನ್ ಮತ್ತು ಐಸೋಲೇಶನ್ ಸೆಂಟರ್ ಸ್ಥಾಪನೆಯಾದಲ್ಲಿ ಮೂಲಭೂತ ಸೌಕರ್ಯಗಳಾದ ಕಾಟ್, ಬೆಡ್, ಬ್ಲ್ಯಾಂಕೆಟ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಪೂರೈಕೆ ಸರಿಯಾದ ರೀತಿಯಲ್ಲಿ ನೀಡಬೇಕು ಎಂದರು.
ಸ್ಥಿತಿ ವಿಕೋಪಕ್ಕೆ ಹೋದಾಗ ಅಗತ್ಯವೆನಿಸಿದಲ್ಲಿ ಸಂಘ ಸಂಸ್ಥೆಗಳ ಸಹಕಾರ ಪಡೆಯಲು ಸ್ವಯಂ ಸೇವಕರ ಪಟ್ಟಿ ಸಿದ್ಧಪಡಿಸಿಟ್ಟುಕೊಳ್ಳಿ ಎಂದು ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ ನೇತೃತ್ವದ ಖಾಸಗಿ ಮಾನವ ಸಂಪನ್ಮೂಲ ಪೂರೈಕೆ ಸಮಿತಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಕೋವಿಡ್ ಲಸಿಕೆ ನೀಡುವಿಕೆ ಚುರುಕುಗೊಳಿಸಬೇಕು. ಲಸಿಕಾ ಕೇಂದ್ರಕ್ಕೆ ಆಗಾಗ ಭೇಟಿ ನೀಡಿ ಹೆಚ್ಚು ಜನರು ಲಸಿಕೆ ಪಡೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀಷ್ ಶಶಿ ಅವರಿಗೆ ನಿರ್ದೇಶಿಸಲಾಯಿತು.
ಕಲಬುರಗಿ ನಗರದಲ್ಲಿ ಕೋವಿಡ್ ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಅರಿವು, 24 ಗಂಟೆ ಕಂಟ್ರೋಲ್ ರೂಂ ಸ್ಥಾಪನೆ ಹಾಗೂ ಟೆಲಿಫೋನ್ ಮೂಲಕ ವೈದ್ಯಕೀಯ ಸೇವೆ, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದು ಸೇರಿದಂತೆ ಸಾರ್ವಜನಿಕ ಕುಂದುಕೊರತೆಗಳ ನಿವಾರಿಸಲು ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ನೇತೃತ್ವದ ಸಮಿತಿಗೆ ಜವಾಬ್ದಾರಿ ನೀಡಿದ್ದು, ಸಮರ್ಥವಾಗಿ ನಿಭಾಯಿಸಲು ತಿಳಿಸಲಾಯಿತು.
ಕಲಬುರಗಿ ನಗರದಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ನಿಗಾ ವಹಿಸಬೇಕು. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋವಿಡ್-19 ಶಿಷ್ಠಚಾರ ಸಮಿತಿಗೆ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಸೂಚಿಸಿದರು.
ಚೆಕ್ ಪೋಸ್ಟ್‍ಗಳಲ್ಲಿ ಮೂಲಸೌಕರ್ಯ ಕಲ್ಪಿಸಿ: ಮಹಾರಾಷ್ಟ್ರ ಗಡಿಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಶೆಲ್ಟರ್ ನಿರ್ಮಾಣ, ಸುರಕ್ಷಾ ಬ್ಯಾರಿಕೇಡ್ಸ್, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಥರ್ಮಲ್ ಸ್ಕ್ಯಾನರ್, ಮಾಸ್ಕ್ ಪೂರೈಕೆ ಸೇರಿದಂತೆ ಇನ್ನೀತರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಮತು ರೈಲು ನಿಲ್ದಾಣಗಳಲ್ಲಿಯೂ ಚೆಕ್ ಪೋಸ್ಟ್ ಸ್ಥಾಪಿಸಿ ಅಲ್ಲಿ ಬರುವ ಪ್ರಯಾಣಿಕರಿಗೆ ಸೂಕ್ತವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ನೇತೃತ್ವದ ಸಮಿತಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಕಂಟೇನ್‍ಮೆಂಟ್ ಝೋನ್ ಸ್ಥಾಪಿಸಿ: ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಕಂಟೇನ್‍ಮೆಂಟ್ ಝೋನ್ ಸ್ಥಾಪಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಜಿಮ್ಸ್ ನಿರ್ದೇಶಕ ಡಾ.ಕವಿತಾ ಪಾಟೀಲ ಸೇರಿದಂತೆ 20 ಸಮಿತಿಗಳ ಸದಸ್ಯ ಅಧಿಕಾರಿಗಳು, ಉಪ ವಿಭಾಗದ ಸಹಾಯಕ ಆಯುಕ್ತರು, ತಾಲೂಕಿನ ತಹಶೀಲ್ದಾರರು ಭಾಗವಹಿಸಿದ್ದರು.