ಕೋವಿಡ್ 2ನೇ ಅಲೆ ಶುರುವಾಗುವ ಸಂಭವವಿದೆ, ಜವಾಬ್ದಾರಿಯಿಂದ ವರ್ತಿಸಿ:ಡಾ. ರಾಜಶೇಖರ ಮಾಲಿ

ಕಲಬುರಗಿ.ಮಾ.22: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, 2ನೇ ಅಲೆ ಶುರುವಾಗುವ ಸಂಭವವಿದೆ. ಸಾರ್ವಜನಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಡಾ. ರಾಜಶೇಖರ ಮಾಲಿ ಅವರು ಸಲಹೆ ನೀಡಿದ್ದಾರೆ.
ಸೋಮವಾರ ನಗರದ ಜಿಲ್ಲಾ ಸಮೀಕ್ಷಣಾ ಘಟಕದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಸಹ ದಿನೇ-ದಿನೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಾಣಲಾಗುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು ಹಾಗೂ ಆಗಾಗ ಸ್ಯಾನಿಟೈಸರ್ ಬಳಸುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ರಿಂದ 59 ವರ್ಷ ಒಳಗಿನ ಧೀರ್ಘವಾದಿ ಖಾಯಿಲೆಯಿಂದ ಬಳತ್ತಿರುವವರು ಕೂಡಲೇ ಸ್ವಯಂ ಪ್ರೇರಿತವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.
ಕಳೆದ 2 ತಿಂಗಳಿನಿಂದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಲಸಿಕೆ ಪಡೆದುಕೊಳ್ಳಲು ವಾಹನ ಸಂಪರ್ಕ ವ್ಯವಸ್ಥೆ ಇಲ್ಲದೆ ಇರುವುದರಿಂದ ಲಸಿಕೆ ನೀಡುವಿಕೆ ಪ್ರಮಾಣ ಕುಸಿದಿದೆ. ಆದರಿಂದ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ಹೋಗಲು ವಾಹನ ವ್ಯವಸ್ಥೆ ಬಗ್ಗೆ ಚಿಂತನೆ ನಡೆದಿದ್ದು, ಗ್ರಾಮ ಪಂಚಾಯತಿಯಿಂದಲೇ ವಾಹನ ವ್ಯವಸ್ಥೆ ಶೀಘ್ರದಲ್ಲಿಯೇ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಶೇ. 100 ರಷ್ಟು ವ್ಯಾಕ್ಸಿನ್ ನೀಡಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರದ ಇ.ಎಸ್.ಐ, ರೈಲ್ವೆ ಸಿಬ್ಬಂದಿಗಳು ಸೇರಿ ಶೇ.83 ರಷ್ಟು ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಪ್ರತಿದಿನ 3 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ನಗರದಲ್ಲಿ ಅರೋಗ್ಯ ಸಿಬ್ಬಂದಿಗಳು 900 ರಿಂದ 1000 ಜನರಿಗೆ ಕೋವಿಡ್ ಲಸಿಕೆ ನೀಡುತ್ತಿದ್ದಾರೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ 419 ಸಕ್ರಿಯ ಪ್ರಕರಣಗಳಿದ್ದು, 91 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 314 ಜನರು ಹೋಮ್ ಐಸೋಲೇಷನ್‍ನಲ್ಲಿದ್ದಾರೆ ಎಂದು ಅವರು ಅಂಕಿ ಅಂಶ ಬಿಚ್ಚಿಟ್ಟರು. ಕಲಬುರಗಿ ನಗರದಲ್ಲಿ ಕೋವಿಡ್ ಉಲ್ಬಣವಾಗುತ್ತಿದೆ. ಮತ್ತೆ ಲಾಕ್ ಡೌನ್ ಆಗೋದನ್ನು ತಪ್ಪಿಸುವುದು ಸಾರ್ವಜನಿಕರ ಕೈಯಲ್ಲಿದೆ. ಎಲ್ಲರೂ ಮುಂಜಾಗ್ರತಾ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ವಿವೇಕಾನಂದ ರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.