ಕೋವಿಡ್ 2ನೇ ಅಲೆ ತಪ್ಪದೇ ಕೋವಿಡ್-19 ಲಸಿಕೆ ಪಡೆಯಿರಿ: ಶಾಸಕ ಯತ್ನಾಳ

ವಿಜಯಪುರ:ಏ.19: ದೇಶದಲ್ಲಿ ದಿನೇ ದಿನೇ ಕೋವಿಡ್-19 ಎರಡನೇ ಅಲೆಯು ಹೆಚ್ಚಾಗುತ್ತಿದ್ದು, 45 ವರ್ಷ ಮೇಲ್ಪಟ್ಟವರು ತಪ್ಪದೇ ಕೋವಿಡ್-19 ಲಸಿಕೆ ಪಡೆಯುವಂತೆ ನಗರ ಶಾಸಕರಾದ ಶ್ರೀ ಬಸನಗೌಡ ರಾ ಪಾಟೀಲ (ಯತ್ನಾಳ) ಅವರು ಕರೆ ನೀಡಿದರು.
ಇಂದು ಜಿಲ್ಲೆಯ ನಗರ ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ ರವರು, ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಿದ ಚಾಲುಕ್ಯ ನಗರದ ಮಹೇಶ್ವರಿ ಮಂಗಲ ಕಾರ್ಯಾಲಯದ ಮುಂದೆ ಪ್ರಜಾಪಿತ ಬ್ರಹ್ಮಕುಮಾರಿ ವಿ.ವಿ.ಯ ಸಮುದಾಯ ಭವನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ನಂತರ ಇಲ್ಲಿ ಕೋವಿಡ್ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು ಹಾಗೂ ನಗರದ ಮಠಪತಿಗಲ್ಲಿಯ ಆದಿಶಕ್ತಿ ಸಭಾಭವನದಲ್ಲಿ ಕೋವಿಡ್ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿಶ್ವ ಹಾಗೂ ದೇಶಾದ್ಯಂತ ಕೋವಿಡ್ ಎರಡನೇ ಅಲೆ ಆರಂಭವಾಗಿದೆ. ಕಾರಣ ಎಲ್ಲರೂ ಜಾಗೃತರಾಗಿ ಇರುವುದರ ಜೊತೆಗೆ ಸರಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ನಿರ್ಲಕ್ಷದಿಂದ ಮಾರಕ ರೋಗಕ್ಕೆ ತುತ್ತಾದಲ್ಲಿ ಸಮಸ್ಯೆ ಎದುರಿಸಬಹುದಾಗಿದ್ದು ಜಾಗೃತರಾಗಿ ತಕ್ಷಣ ಕೋವಿಡ್ -19 ಲಸಿಕೆ ತಪ್ಪದೇ ಪಡೆಯುವಂತೆ ಅವರು ಸಲಹೆ ನೀಡಿದರು.
ಭಾರತದಲ್ಲೇ ಅಭಿವೃದ್ಧಿ ಪಡಿಸಿದ ಅತ್ಯಂತ ಸುರಕ್ಷಿತ ಹಾಗೂ ಕೊರೋನಾ ವನ್ನು ಮಣಿಸಲು ಅಗತ್ಯವಿರುವ ಈ ಲಸಿಕೆಯನ್ನು ಎಲ್ಲ ಹಿರಿಯ ನಾಗರಿಕರು ಹಾಗೂ ಅರ್ಹ ವ್ಯಕ್ತಿಗಳು ಪಡೆದುಕೊಳ್ಳಲು ಕೋವಿಡ್-19 ಲಸಿಕೆ ಕುರಿತು ಜಾಗೃತಿ ಮೂಡಿಸಿ, ಸ್ವಯಂಪ್ರೇರಿತವಾಗಿ ಲಸಿಕೆ ಪಡೆದು ಭಾರತವನ್ನು ಕೊರೊನಾ ಮುಕ್ತವಾಗಿಸಲು ಸಹಕರಿಸಿ ಎಂದು ನಾಗರಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ. ಡಿ. ಎ ಅಧ್ಯಕ್ಷರು ಶ್ರೀಹರಿ ಗೊಳಸಂಗಿ, ವೈದ್ಯಾಧಿಕಾರಿ ಶ್ರೀಮತಿ ಅಗರವಾಲ ಹಾಗೂ ಮುಖಂಡರು ಉಪಸ್ಥಿತರಿದ್ದರು.