ಕೋವಿಡ್ 2ನೇ ಅಲೆ : ತಪಾಸಣೆ ಹೆಚ್ಚಿಸಿದ ಜಿಲ್ಲಾಡಳಿತ ಸಾರ್ವಜನಿಕ ಸ್ಥಳಗಳಲ್ಲಿ ಕರೊನಾ ಪರೀಕ್ಷೆ

ಕಲಬುರಗಿ.ಏ.17:ಕೋವಿಡ್-19 ಎರಡನೇ ಅಲೆಯ ಹಾವಳಿ ಜಿಲ್ಲೆಯಲ್ಲಿ ಕ್ರಮೇಣ ಹೆಚ್ಚುತ್ತಿರುವುದರಿಂದ ಸೋಂಕಿತರನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಯ ಮೊಬೈಲ್ ವ್ಯಾನ್ ಮೂಲಕ ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಮಾಡುವ ಕೆಲಸವನ್ನು ಚುರುಕುಗೊಳಿಸಲಾಗಿದೆ. ಈ ಮೂಲಕ ಆರೋಗ್ಯ ಇಲಾಖೆಯ ಒಳ್ಳೆಯ ಕೆಲಸ ಶುರು ಮಾಡಿದೆ.
ಜಿಲ್ಲಾಳಿತದ ಸಲಹೆಯಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮೊಬೈಲ್ ವ್ಯಾನ್‍ದಲ್ಲಿ ನಗರದ ಸೂಪರ್ ಮಾರ್ಕೇಟ್, ನೆಹರು ಗಂಜ್, ಕಪಡಾ ಬಜಾರ, ಚೌಕ್ ವೃತ್ತ, ಸರದಾರ ವಲ್ಲಭಭಾಯಿ ಪಟೇಲ್ ವೃತ್ತ, ಕೋರ್ಟ್ ಸರ್ಕಲ್, ಕೇಂದ್ರ ಬಸ್ ನಿಲ್ದಾಣ ಮುಂಭಾಗ ಹೀಗೆ ಪ್ರಮುಖ ಸ್ಥಳಗಳಲ್ಲಿ ಸಂಚಾರಿ ವ್ಯಾನ್ ತಂದು ನಿಲ್ಲಿಸಿ ಜನರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.

ಕರೊನಾ ಹರಡುವಿಕೆ ತಗ್ಗಿಸಲು ತಪಾಸಣೆ ಪ್ರಮಾಣವನ್ನು ಹೆಚ್ಚಳ ಮಾಡುವ ಮೂಲಕ ಆರಂಭದಲ್ಲಿಯೇ ಸೋಂಕಿತರನ್ನು ಪತ್ತೆ ಮಾಡುವುದೊಂದೆ ಮದ್ದಾಗಿರುವುದರಿಂದ ಜಿಲ್ಲಾಡಳಿತ ಪರೀಕ್ಷೆ ಪ್ರಮಾಣ ಹೆಚ್ಚಿದೆ. ಜಿಲ್ಲೆಯಲ್ಲಿ ಪ್ರತಿದಿನ 5600 ಜನರಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ನೀಡಿರುವ ಗುರಿಗಿಂತಲೂ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಎರಡು ಕಡೆ ಕೋವಿಡ್ ಕೇರ್ ಸೆಂಟರ್

ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎರಡು ಕಡೆಗೆ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ. ಈಗಾಗಲೇ ಬುದ್ದ ವಿಹಾರ ಹತ್ತಿರದಲ್ಲಿರುವ ಪಾಲಿ ಸೆಂಟರ್‍ನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು, ಅಲ್ಲಿ 28 ಜನರು ಆರೈಕೆಯಲ್ಲಿದ್ದಾರೆ. ಇನ್ನೂ ರಿಂಗ್‍ರೋಡ್‍ನಲ್ಲಿರುವ ಯೂನಾನಿ ಹಾಸ್ಟಿಟಲ್‍ನ್ನು ಸಹ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಕೆಲಸಗಳನ್ನು ಮಾಡಿಕೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಮೋಹನರಾಜ್ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್
ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲನಿಯ ಮೊರೆ ಕಾಂಪ್ಲೆಕ್ಸ್ ಹತ್ತಿರದಲ್ಲಿರುವ ಮೋಹನರಾಜ್ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಘೋಷಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಈ ಆಸ್ಪತ್ರೆಗೆ ಅನುಮತಿಸಲಾಗಿದೆ. ಇನ್ನೂ ಎರಡು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೋಹನರಾಜ ಆಸ್ಪತ್ರೆಯಲ್ಲಿ ಸೌಮ್ಯ ರೂಪದ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲ ಔಷಧಗಳನ್ನು ಸಂಗ್ರಹಿಸಿಕೊಳ್ಳಲು ಸೂಚನೆ ನೀಡಲಾಗಿದೆ.