ಕೋವಿಡ್-19 ಹೆಲ್ಪ್ ಡೆಸ್ಕ್‍ಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಭೇಟಿ

ಕಲಬುರಗಿ.ಏ.20: ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆಯಾದ ನಂತರ ಚಿಕಿತ್ಸೆ, ಆಸ್ಪತ್ರೆ ಮತ್ತು ಹಾಸಿಗೆ ಸ್ಥಿತಿಗತಿಗಳ ಮಾಹಿತಿ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬಲು ಜಿಲ್ಲಾಡಳಿತದಿಂದ ಸ್ಥಾಪಿಸಲಾಗಿರುವ ಕೋವಿಡ್-19 ಹೆಲ್ಪ್ ಡೆಸ್ಕ್‍ಗೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಭೇಟಿ ನೀಡಿ ಪರಿಶೀಲಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿನ ಹೆಲ್ಪ್ ಡೆಸ್ಕ್‍ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಕೋವಿಡ್-19 ಕುರಿತು ಸಾರ್ವಜನಿಕರಲ್ಲಿ ಅನೇಕ ಗೊಂದಲಗಳಿದ್ದು, ಅವಗಳನ್ನು ಹೋಗಲಾಡಿಸುವುದಕ್ಕಾಗಿ ಕಲಬುರಗಿ ನಗರದ 46 ಕಡೆಗೆ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಹಕಾರದೊಂದಿಗೆ ಜಿಲ್ಲಾಡಳಿತವು ಹೆಲ್ಪ್ ಡೆಸ್ಕ್‍ಗಳನ್ನು ಸ್ಥಾಪಿಸಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಮತ್ತು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಡಿ.ಸಿ.ಕಚೇರಿ, ಪಾಲಿಕೆ ಕಚೇರಿ, ಪ್ರಮುಖ ವೃತ್ತಗಳಲ್ಲಿ ಜನರು ಹೆಚ್ಚಾಗಿ ಓಡಾಡುವ ಜಾಗಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದೆ ಎಂದರು.
ಹೆಲ್ಪ್ ಡೆಸ್ಕ್‍ನಲ್ಲಿ ಜನರಿಗೆ ಕೋವಿಡ್-19ಯ ಸರ್ಕಾರಿ ಹಾಗೂ ಖಾಸಗಿ ಕೋವಿಡ್ ಆಸ್ಪತ್ರೆ, ಕೋವಿಡ್ ಪರೀಕ್ಷಾ ಕೇಂದ್ರ, ವ್ಯಾಕ್ಸಿನ್ ಕೇಂದ್ರ, ಪೆÇಲೀಸ್ ಕಂಟ್ರೋಲ್ ರೂಮ್, ಆರೋಗ್ಯ ಸುರಕ್ಷಾ ಹೆಲ್ಪ್ ಸೆಂಟರ್‍ನ ಹೆಲ್ಪ್ ಲೈನ್, ಆಂಬುಲೆನ್ಸ್ ಹಾಗೂ ತುರ್ತು ಕೋವಿಡ್ ಸಹಾಯವಾಣಿ ಸಂಖ್ಯೆ ಕುರಿತ ಮಾಹಿತಿಯನ್ನು ನೀಡಲಾಗುತ್ತಿದೆ. ಅನಕ್ಷರಸ್ಥರಿಗೆ ಇದು ತುಂಬಾ ನೆರವಿಗೆ ಬರಲಿದೆ. ಇದಲ್ಲದೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ಬೆಡ್ (ಹಾಸಿಗೆ)ಗಳ ಮಾಹಿತಿ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿ ತುಂಬಾ ಗಂಭೀರ ಸ್ಥಿತಿಯಲ್ಲಿದಲ್ಲಿ ಹಾಸಿಗೆ ಖಾಲಿಯಿರುವ ಆಸ್ಪತ್ರೆಗೆ ಸಂಪರ್ಕಿಸಿ ರೋಗಿಯನ್ನು ಚಿಕಿತ್ಸೆಗೆ ಕಳುಹಿಸಲಾಗುತ್ತದೆ. ಪ್ರಮುಖವಾಗಿ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ಮತ್ತು ಧೈರ್ಯ ನೀಡುವ ಕೆಲಸ ಸಹಾಯವಾಣಿ ಮಾಡಲಿದೆ. ಸಹಾಯವಾಣಿಯಲ್ಲಿ ಇಬ್ಬರು ಶಿಕ್ಷಕರು, ಓರ್ವ ಹೋಂ ಗಾರ್ಡ್ ಹಾಗೂ ಕೆ.ಕೆ.ಆರ್.ಡಿ.ಬಿ. ಪ್ರಾಯೋಜಿತ ಆರೋಗ್ಯ ಸುರಕ್ಷಾ ಚಕ್ರದ ಓರ್ವ ಆರೋಗ್ಯ ಕಾರ್ಯಕರ್ತ ಇರಲಿದ್ದು, ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಕಾರ್ಯನಿರ್ವಹಿಸಲಿದೆ ಎಂದರು.
ಇದೇ ಮಾದರಿಯಲ್ಲಿ ಪ್ರತಿ ತಾಲೂಕಿನಲ್ಲಿಯೂ ಸಹ 2-3 ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದೆ ಎಂದ ಡಿ.ಸಿ. ಅವರು 5 ನಿಮಿಷ ಅವಧಿಯೊಳಗೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ ಎಂದು ಹೆಲ್ಪ್ ಡೆಸ್ಕನ ಕಾರ್ಯವೈಖರಿ ಬಗ್ಗೆ ವಿವರಿಸಿದರು.
ಕಲಬುರಗಿ ನಗರದಲ್ಲಿ ಔಷಧಿ ಮತ್ತು ಆಕ್ಸಿಜನ್ ಕೊರತೆಯಲ್ಲ. ಬಳ್ಳಾರಿಯಿಂದ ಲಿಕ್ವಿಡ್ ಆಕ್ಸಜನ್ ಸಹ ತರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮತ್ತು ಸಂಸದ ಡಾ.ಉಮೇಶ ಜಾಧವ ಅವರು ತುಂಬಾ ಸಹಕಾರ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾದಲ್ಲಿ ತಕ್ಷಣ ಪೂರೈಸಲು ಎಮರ್ಜೆಂಸಿ ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಿದ್ದು, ಆಸ್ಪತ್ರೆಯ ಕೋರಿಕೆ ಮೇರೆಗೆ ಆಕ್ಸಿಜನ್ ಟ್ಯಾಂಕ್ ಪೂರೈಸಲಾಗುತ್ತಿದೆ ಎಂದರು.
ಕೋವಿಡ್-19 ಬಗ್ಗೆ ಅನಗತ್ಯ ಭಯ ಬೇಡ. ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ಕೋವಿಡ್ ನಿಯಮಾವಳಿ ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಮನವಿ ಮಾಡಿದರು.
ಕಲಬುರಗಿಯ ಜಿಮ್ಸ್‍ನಲ್ಲಿರಿವ ಟ್ರಾಮಾ ಕೇರ್ ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದರಿಂದ ಹೆಚ್ಚುವರಿ 100 ಹಾಸಿಗೆಗಳು ಲಭ್ಯವಾಗಿದ್ದು, ಜಿಮ್ಸ್ ನಲ್ಲಿಯೇ 400ಕ್ಕೂ ಹೆಚ್ಚು ಹಾಸಿಗೆಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಿದೆ ಎಂದರು.
5 ಕ್ಷಿಪ್ರ ಪಡೆ ರಚನೆ: ಕೋವಿಡ್ ನಿಯಂತ್ರಣ ಕಾರ್ಯಕ್ಕೆ ವೇಗ ಹೆಚ್ಚಿಸಲು ನಗರದಲ್ಲಿ 5 ಕ್ಷಿಪ್ರ ಕಾರ್ಯಪಡೆ (ಕ್ವಿಕ್ ರೆಸ್ಪಾನ್ಸ್ ಟೀಂ) ತಂಡಗಳನ್ನು ರಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು 2 ತಂಡ, ಆಸ್ಪತ್ರೆಗಳಲ್ಲಿ ಶಾಂತಿ ಸುವ್ಯಸ್ಥೆ ಹಾಳಾದಲ್ಲಿ ತಕ್ಷಣವೇ ಧಾವಿಸಲು 1 ಪೆÇಲೀಸ್ ತಂಡ ಹಾಗೂ ತುರ್ತು ಅಂಬುಲೆನ್ಸ್ ಸೇವೆ ಒದಗಿಸುವುದು ಸೇರಿದಂತೆ ಹೆಲ್ಪ್ ಡೆಸ್ಕ್‍ಗೆ ಪೂರಕವಾಗಿ 2 ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿ ನೀಡಿದರು
ಆಳಂದನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ: ಆಳಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಬಾಲಕೀಯರ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ರೋಗ ಲಕ್ಷಣವಿಲ್ಲದ ಸೋಂಕಿತರಿಗೆ ಹೋಂ ಐಸೋಲೇಷನ್‍ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇನ್ನು ಅವಶ್ಯಕತೆವಿದ್ದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಪ್ರಸ್ತುತ ಕಲಬುರಗಿಯಲಿ 2 ಕೋವಿಡ್ ಸೆಂಟರ್ ತೆರೆದಿದ್ದು, ಅವಶ್ಯಕತೆವಿದ್ದಲ್ಲಿ ಹೆಚ್ಚಿನ ಕೇಂದ್ರ ತೆರೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಡಿಡಿಪಿಐ ಅಶೋಕ ಭಜಂತ್ರಿ, ದಕ್ಷಿಣ ವಲಯ ಬಿ.ಇ.ಓ ಶಂಕ್ರೆಮ್ಮ ಡೌಳಗಿ, ಉತ್ತರ ವಲಯ ಬಿ.ಇ.ಓ ಎಸ್. ಬನ್ನಿಕಟ್ಟಿ ಸೇರಿದಂತೆ ಶಿಕ್ಷಕರು, ಕೋವಿಡ್ ಸುರಕ್ಷಾ ಚಕ್ರ ಸಿಬ್ಬಂದಿಗಳು, ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.