ಕೋವಿಡ್-19 ಸೋಂಕು‌ ನಿಯಂತ್ರಣ ಕಾರ್ಯಕ್ಕೆ ಎನ್.ಜಿ.ಓ.ಗಳ ಸಹಕಾರ ಕೋರಿದ ರಾಹುಲ‌ ಪಾಂಡ್ವೆ

ಕಲಬುರಗಿ.ಏ.20: ಕಲಬುರಗಿ ನಗರದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜೆಸ್ಕಾಂ ಎಂ.ಡಿ. ಮತ್ತು ಕೋವಿಡ್-19 ಮಾನನ ಸಂಪನ್ಮೂಲ ಪೂರೈಕೆ ಸಮಿತಿಯ ಅಧ್ಯಕ್ಷ ರಾಹುಲ ಪಾಂಡ್ವೆ ಅವರು ಎನ್.ಜಿ.ಓ ಗಳ ಸಹಕಾರ ಕೋರಿದರು.

ಮಂಗಳವಾರ ಈ ಸಂಬಂಧ‌ ತಮ್ಮ ಕಚೇರಿಯಲ್ಲಿ ನಗರದ ವಿವಿಧ ಸ್ವಯಂ‌ ಸೇವಾ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಎನ್.ಜಿ.ಓ.ಗಳ ಸೇವೆ ಸ್ಮರಣೀಯವಾಗಿದ್ದು, ಪ್ರಸ್ತುತ ಈಗಿನ ಕೊರೋನಾ ಸಂಕಷ್ಟದ ಸಮಯದಲ್ಲಿಯೂ ತಮ್ಮ ಸೇವೆ ಜಿಲ್ಲಾಡಳಿತಕ್ಕೆ ಅವಶ್ಯಕತೆವಿದೆ ಎಂದು ಹೇಳಿದರು.

ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕಲಬುರಗಿ ನಗರದ ವಿವಿಧೆಡೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹೆಲ್ಪ ಡೆಸ್ಕ್, ಹೆಲ್ಪ ಲೈನ್ ಸೆಂಟರ್ ತೆರೆಯುತ್ತಿದೆ. ಇದರ ಜೊತೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಸುರಕ್ಷಾ ಚಕ್ರ ಸಹ ಕಾರ್ಯನಿರ್ವಹಿಸಲಿದೆ. ಇದಲ್ಲದೆ ನಗರದ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ‌ ಅಂತರ ಪಾಲನೆ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಕುರಿತು ಅರಿವು ಮೂಡಿಸುವ ಅವಶ್ಯಕತೆವಿದೆ, ಇದಕ್ಕಾಗಿ ನಿಮ್ಮ‌ಸೇವೆ ಬೇಕು ಎಂದು ಕೋರಿದರು. ಸಭೆಯಲ್ಲಿ ಭಾಗವಹಿಸಿದ ಎನ್.ಜಿ.ಓ.ಗಳ ಮುಖಂಡರು ಜಿಲ್ಲಾಡಳಿತ ಅಪೇಕ್ಷಿಸಿದಂತೆ ತಾವು ಕಾರ್ಯನಿರ್ವಹಿಸಲು ಸಿದ್ಧ ಎಂದು ತಿಳಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ‌ ಲೋಖಂಡೆ ಸೇರಿದಂತೆ ನಗರದ ವಿವಿಧ ಎನ್.ಜಿ.ಓ ಸಂಸ್ಥೆಗಳ ಮುಖಂಡರು ಇದ್ದರು.