ಕೋವಿಡ್-19 ಸರಪಳಿಯನ್ನು ತುಂಡರಿಸೋಣ: ಪ್ರಭು ಚವ್ಹಾಣ್

ಬೀದರ:ಮೇ.26: ಎಲ್ಲರು ಒಗ್ಗೂಡಿ ಕೆಲಸ ಮಾಡಿ ಕೋವಿಡ್ ಸರಪಳಿಯನ್ನು ತುಂಡರಿಸಿ ಕೊರೊನಾ ಮುಕ್ತ ಬೀದರ ಜಿಲ್ಲೆಯನ್ನಾಗಿ ಮಾಡೋಣ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹೇಳಿದರು.
ಕಮಲನಗರದ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಕೋರೋನಾ ವಾರಿಯರ್ಸಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆರೊಗ್ಯ, ಪೊಲೀಸ್ ಸೇರಿದಂತೆ ಇನ್ನೀತರ ಎಲ್ಲ ಇಲಾಖೆಗಳು ಒಗ್ಗೂಡಿ ಕೆಲಸ ಮಾಡಬೇಕು. ಇದಕ್ಕೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದರು.
ಬೀದರ ಜಿಲ್ಲೆಯಲ್ಲಿ ಎರಡನೇ ಅಲೆಯ ಆರಂಭದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುಮುಖವಾಗಿತ್ತು. ಜಿಲ್ಲಾಡಳಿತ, ತಾಲೂಕಾಡಳಿತ ಅಗತ್ಯ ಕ್ರಮ ವಹಿಸಿದ್ದರಿಂದ ಬೀದರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇದೀಗ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಯತ್ನದ ಹಿಂದಿನ ಎಲ್ಲ ಕೋರೊನಾ ವಾರಿಯರ್ಸಗೆ ತಾವುಗಳು ಸನ್ಮಾನಿಸಿ, ಇನ್ನಷ್ಟು ಕೆಲಸ ಮಾಡಲು ಅವರಿಗೆ ಹುರಿದುಂಬಿಸುತ್ತಿದ್ದೇನೆ ಎಂದರು.
ಕೊವಿಡ್ ತೆಡೆಗೆ ಸರ್ಕಾರದಿಂದ ಏನು ಬೇಕು, ತಮ್ಮ ಕಡೆಯಿಂದ ಏನು ಬೇಕು ಎಂಬುದರ ಬಗ್ಗೆ ತಾವುಗಳು ತಿಳಿಸಿದರೆ ತಾವು ತಪ್ಪದೇ ಸ್ಪಂದನೆ ಮಾಡುವುದಾಗಿ ತಿಳಿಸಿದ ಸಚಿವರು, ರಾಜ್ಯ ಸರ್ಕಾರ, ತಾವುಗಳು ಸದಾಕಾಲ ತಮ್ಮ ಜೊತೆಗೆ ಇರುವುದಾಗಿ ಸಚಿವರು ಭರವಸೆ ನೀಡಿದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಈ ಕೊವಿಡ್ ತಡೆಗೆ ಅತ್ಯಂತ ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದನ್ನು ನಾವು ತಿಳಿದುಕೊಳ್ಳಬೇಕು. ಬಹಳ ಮುಖ್ಯವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಶ್ರಮವನ್ನು ನಾವು ಸ್ಮರಿಸಲೇಬೇಕು. ಅವರಿಗೆ ಸಹಕಾರ ನೀಡಬೇಕು ಎಂದರು.
ಬೀದರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಶೂನ್ಯಕ್ಕೆ ಇಳಿಯುವವರೆಗೆ ಕಾರ್ಯಚರಣೆ ನಡೆಯಬೇಕು. ಕೋವಿಡ್ ಸೋಂಕಿತರಿಗೆ ಎಲ್ಲ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸಿ ಸಿಗಬೇಕು. ವಿಶೇಷವಾಗಿ ಆಸ್ಪತ್ರೆಗಳು ಶುಚಿತ್ವದಿಂದ ಕೂಡಿರಬೇಕು ಎಂದು ಮನವಿ ಮಾಡಿದರು.
ಕೋವಿಡ್ ಸೋಂಕಿತರನ್ನು ನೋಡಿಕೊಳ್ಳುವ ಜೊತೆಜೊತೆಗೇನೆ ಇತರ ಕಾಯಿಲೆಯಿಂದ ಬಳಲುವವರಿಗೂ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗಬೇಕು. ಕ್ಯಾನ್ಸರ್, ಮಧುಮೇಹ, ಹೃದಯಕಾಯಿಲೆ, ಎಚ್‍ಐವಿ, ಕಿಡ್ನಿ ವೈಫಲ್ಯದಂತಹ ಇನ್ನೀತರ ಕಾಯಿಲೆಗಳಿಂದ ಬಳಲುವವರ ಆರೋಗ್ಯದ ಬಗ್ಗೆ ಕೂಡ ನಾವು ಈ ಸಂದರ್ಭದಲ್ಲಿ ಗಮನ ಹರಿಸಬೇಕು ಎಂದು ಸಚಿವರು ವೈದ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು.
ಲಸಿಕೆ ನೀಡಿಕೆಗೆ ಒತ್ತು ಕೊಡಿ: ಕೋವಿಡ್ ಲಸಿಕೆಯನ್ನು ಪಡೆದುಕೊಂಡಲ್ಲಿ ನಾವು ಕೊರೋನಾದಿಂದ ಆಗುವ ಅಪಾಯದಿಂದ ದೂರ ಇರಬಹುದು ಎಂಬುದನ್ನು ನಾವು ಪ್ರತಿಯೊಬ್ಬರಿಗೂ ತಿಳಿಸಿ, ಬೀದರ ಜಿಲ್ಲೆಯಾದ್ಯಂತ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಸಚಿವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಶರಣಯ್ಯ ಸ್ವಾಮಿ, ಕಮಲನಗರ ಸಮುದಾಯ ಆರೊಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಗಾಯತ್ರಿ ಹಾಗೂ ಇತರರು ಇದ್ದರು.