ಕೋವಿಡ್ -19 ಲಸಿಕೆ ಹಂಚಿಕೆ ಕುರಿತು ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಿ

ವಿಜಯಪುರ ಡಿ.24: ಕೋವಿಡ್-19 ಲಸಿಕೆ ಹಂಚಿಕೆಗೆ ಸಂಬಂಧಪಟ್ಟಂತೆ ಸೂಕ್ತ ಯೋಜನೆ ರೂಪಿಸುವ ಜೊತೆಗೆ ಲಸಿಕೆ ನೀಡುವ ಕಾರ್ಯವು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಸಲಹೆ ನೀಡಿದ್ದಾರೆ.

ನಗರದ ಮಧುವನ ಹೊಟೇಲ್‍ದಲ್ಲಿಂದು ಕೋವಿಡ್-19 ಲಸಿಕೆ ಪರಿಚಯ ಕುರಿತಂತೆ ಆರೋಗ್ಯ ಇಲಾಖೆ, ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಹಾಗೂ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಈ ಲಸಿಕಾ ಸಂಗ್ರಹಣೆ ಮತ್ತು ವಿತರಣಾ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಇದಕ್ಕಾಗಿ ವಿಶೇಷ ಯೋಜನೆ ಮತ್ತು ಶಿಷ್ಟಾಚಾರ ಪರಿಪಾಲಿಸುವಂತೆ ತಿಳಿಸಿದ ಅವರು ಮೊದಲ ಹಾಗೂ ಎರಡನೇ ಹಂತ ಸರಾಗವಾಗಿ ನಿಭಾಯಿಸಬಹುದಾಗಿದ್ದು, ಮೂರನೇ ಹಂತದಲ್ಲಿ ಲಸಿಕಾ ನೀಡುವ ಕಾರ್ಯ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಈ ಲಸಿಕೆಗಾಗಿ ಮೂರನೇ ಹಂತದಲ್ಲಿ ಗುರುತಿಸಲಾಗುವ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷರೊಳಗಿನ ಕೋಮಾರ್ಬಿಡಿಟಿ ರೋಗಿಗಳ ಖಚಿತತೆ ಪತ್ತೆ ಹಚ್ಚಿ ಲಸಿಕೆ ನೀಡುವುದು ಸವಾಲಾಗಲಿದೆ. ಕಾರಣ ಸೂಕ್ತ ಡೇಟಾ ಸಂಗ್ರಹಣೆ ಮತ್ತು ಅರ್ಹರನ್ನು ಗುರುತಿಸುವ ಕಾರ್ಯ ಶಿಸ್ತುಬದ್ಧವಾದ ನಿಗದಿತ ನಮೂನೆಯಲ್ಲಿ ಭರ್ತಿಯೊಂದಿಗೆ ನಿರ್ವಹಣೆ ಮಾಡಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಲಸಿಕಾ ಕಾರ್ಯಕ್ರಮ ನಿರ್ವಹಣೆ ಮತ್ತು ಅನುಷ್ಠಾನ ಅತ್ಯಂತ ಮಹತ್ವವಾಗಿದ್ದು, ಚುನಾವಣಾ ಮಾದರಿಯಲ್ಲಿಯೇ ಅನುಷ್ಠಾನಗೊಳಿಸಬೇಕಾಗಿದೆ. ಲಸಿಕೆ ನೀಡುವ ಸಂದರ್ಭದಲ್ಲಿ ಮೂರು ಕೊಠಡಿಗಳನ್ನು ನಿಗದಿಪಡಿಸಬೇಕಾಗಿದ್ದು, ಮೊದಲ ಕೊಠಡಿಯಲ್ಲಿ ಅರ್ಹ ಫಲಾನುಭವಿಗಳ ಅರ್ಹತೆ ಪರಿಶೀಲನೆ, ಎರಡನೇ ಕೊಠಡಿಯಲ್ಲಿ ಮೂಲ ಸೌಕರ್ಯಗಳ ಸೌಲಭ್ಯ ಮತ್ತು ಚಟುವಟಿಕೆ ಹಾಗೂ ಮೂರನೇ ಕೊಠಡಿಯಲ್ಲಿ ಲಸಿಕಾ ನಂತರ ಪರಿಣಾಮದ ಬಗ್ಗೆ ಪರಿಶೀಲಿಸಬೇಕಾಗಿದ್ದು, ಸಿಬ್ಬಂದಿಗಳನ್ನು ಚುನಾವಣಾ ಮಾದರಿಯಲ್ಲಿ ನೇಮಿಸಬೇಕಾಗಿದೆ. ಕಾರಣ ಈ ಎಲ್ಲ ಅಂಶಗಳ ಬಗ್ಗೆ ಈಗಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ ಅವರು ಅನಿರೀಕ್ಷಿತ ಪರಿಸ್ಥಿತಿ ಎದುರಿಸಲು ಸಹ ಸನ್ನದ್ಧರಾಗುವಂತೆ ತಿಳಿಸಿದ ಅವರು ಸೂಕ್ತ ಕ್ರಿಯಾಯೋಜನೆ ಮತ್ತು ಸಲಹೆಗಳನ್ನು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೂ ಸಹ ತರುವಂತೆ ಅವರು ಸಲಹೆ ನೀಡಿದರು.

ಮುಂಬರುವ ದಿನಗಳಲ್ಲಿ ಬರಬಹುದಾದ ಈ ಲಸಿಕೆ ಸಂಗ್ರಹಕ್ಕೆ ಅವಶ್ಯಕ ವ್ಯವಸ್ಥೆಗಳು ಮಾಡಿಕೊಳ್ಳಬೇಕು. ಈ ಹಿಂದೆ ಮಾಡಲಾದ ಸರ್ವೇ ಮಾಹಿತಿಯನ್ನು ಸೂಕ್ತ ದಾಖಲೀಕರಣ ಮಾಡಿಕೊಂಡಾಗ ಮುಂಬರುವ ದಿನಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಇದನ್ನು ನಿಭಾಯಿಸಬಹುದಾಗಿದೆ. ಈವರೆಗೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 14057 ಫಲಾನುಭವಿಗಳನ್ನು, 332 ಲಸಿಕೆದಾರರನ್ನು ಹಾಗೂ 95 ಮೇಲ್ವಿಚಾರಕರನ್ನು, 108 ಲಸಿಕಾ ಕೇಂದ್ರಗಳನ್ನು ಗುರುತಿಸಿದೆ ಎಂದು ಅವರು ತಿಳಿಸಿದರು.

ಅದರಂತೆ 1410 ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತಿ ಲಸಿಕಾ ಬೂತ್‍ಗಳಲ್ಲಿ ನೇಮಿಸಲಾಗುವ ಐವ್ವರು ಜನ ನುರಿತ, ಅನುಭವಿ ಸಿಬ್ಬಂದಿಗಳನ್ನು ಗುರುತಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದೆ ಮುಂದಿನ ದಿನಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲು ಸಜ್ಜುಗೊಳ್ಳಬೇಕು. ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಲಸಿಕೆ ಹಂಚಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಯೋಜನೆ ರೂಪಿಸಬೇಕು. ಪ್ರತಿದಿನದ ಚಟುವಟಿಕೆ ದಾಖಲೀಕರಣ, ನಿರ್ವಹಣೆ ಅತ್ಯುತ್ತಮವಾಗಬೇಕು. ಡೇಟಾ ರೂಪಿಸುವ ಮತ್ತು ಕ್ರೋಢಿಕರಿಸುವ ಕಾರ್ಯವನ್ನು ಅನುಭವಿಗಳಿಂದ ಮಾಡಿಸುವಂತೆ ಅವರು ಸಲಹೆ ನೀಡಿದರು.

ಮೊದಲ ಹಂತದಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಒಳಗೊಂಡ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ಗುರುತಿಸಲಾಗಿದ್ದು, ಕೋವಿನ್ (ಅಔWIಓ) ಪೋರ್ಟಲ್‍ದಲ್ಲಿಯೂ ಅಪ್‍ಲೋಡ್ ಮಾಡಲಾಗಿದೆ. ಈವರೆಗೆ ಡೇಟಾ ಸಂಗ್ರಹಣೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದರೂ ಕೂಡ ಮುಂದಿನ ದಿನಗಳಲ್ಲಿ ಶಿಸ್ತುಬದ್ಧವಾಗಿ ಲಸಿಕೆ ನೀಡುವುದು ಕೂಡ ಅಷ್ಟೇ ಮಹತ್ವದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಬ್ಲ್ಯೂಎಚ್‍ಒ ಪ್ರತಿನಿಧಿ ಮುಕುಂದ ಗಲಗಲಿ ಅವರು ಮುಂಬರುವ ದಿನಗಳಲ್ಲಿ ಕೋವಿಡ್-19 ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ, ಲಸಿಕೆಯ ಸುರಕ್ಷತ ಸಂಗ್ರಹಣೆಯೊಂದಿಗೆ ಯುದ್ಧೋಪಾದಿಯಲ್ಲಿ ಹಮ್ಮಿಕೊಳ್ಳುವ ಪರಿಸ್ಥಿತಿ ಇರುವುದರಿಂದ ಪರಿಪೂರ್ಣ ಯೋಜನೆ ರೂಪಿಸುವ ಅಗತ್ಯವಿದೆ. ಈವರೆಗೆ ಚಿಕ್ಕಮಕ್ಕಳಿಗೆ ಲಸಿಕಾ ಕಾರ್ಯಕ್ರಮ ಹಲವು ಬಾರಿ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಯುವಜನಾಂಗ ಸೇರಿದಂತೆ ಹಿರಿಯರನ್ನ ಲಸಿಕೆ ನೀಡುವ ಸ್ಥಿತಿಯಿದ್ದು, ಇದಕ್ಕಾಗಿ ಯೋಜನಾಬದ್ಧವಾಗಿ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.