ಕೋವಿಡ್-19 ಲಸಿಕೆ ಪೂರ್ವಾಭ್ಯಾಸ ಅಂಗವಾಗಿ ಮಾದರಿ ಲಸಿಕಾ ಕೇಂದ್ರ ಪರಿಶೀಲನೆ

ವಿಜಯಪುರ ಜ.9: ಜಿಲ್ಲೆಯ 15 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆ ನೀಡುವ ಕುರಿತಂತೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಮಾದರಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪೂರ್ವಾಭ್ಯಾಸ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಥಮ ಹಂತದಲ್ಲಿ ಜಿಲ್ಲೆಯ 15 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ -19 ಲಸಿಕೆ ನೀಡುವ ಕುರಿತಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ 5 ಅಧಿಕಾರಿಗಳನ್ನೊಳಗೊಂಡ ತಂಡಕ್ಕೆ ತರಬೇತಿ ನೀಡಲಾಗಿದೆ. ಇದಕ್ಕಾಗಿ 3 ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ತಂತ್ರಾಂಶದಲ್ಲಿ ಅಪ್‍ಡೇಟ್, ಲಸಿಕೆ ನೀಡುವ ಕಾರ್ಯ ಹಾಗೂ ಲಸಿಕಾ ನಂತರ ಆಬ್ಸರ್ವೇಶನ್‍ಗೆ ಪ್ರತ್ಯೇಕ ಕೊಠಡಿ ಕಾಯ್ದಿರಿಸಿ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ 6 ಸ್ಥಳಗಳಲ್ಲಿ ಇಂದು ಪೂರ್ವಾಭ್ಯಾಸ ಹಮ್ಮಿಕೊಳ್ಳಲಾಗಿದ್ದು, ಕೋವಿಡ್-19 ಲಸಿಕೆ ಹೊರತುಪಡಿಸಿ ಇತರ ಎಲ್ಲ ಸೌಕರ್ಯಗಳನ್ನು ಕಲ್ಪಿಸಿ ಪೂರ್ವಾಭ್ಯಾಸ ನಡೆಸಲಾಗುತ್ತಿದೆ. ಚುನಾವಣಾ ಮಾದರಿಯಲ್ಲಿ ಸಿಬ್ಬಂದಿಗಳ ನಿಯೋಜನೆ, ತಂತ್ರಾಂಶದಲ್ಲಿ ಫಲಾನುಭವಿಗಳ ಹೆಸರು ಪರಿಶೀಲನೆ, ಕೋವಿಡ್ ಲಸಿಕೆ ನಂತರ ಆಗುವ ವ್ಯತರಿಕ್ತ ಪರಿಣಾಮಗಳ ಬಗ್ಗೆ ಪರಿಶೀಲಿಸಿ ಅಂತಹ ಪ್ರಕರಣ ಕಂಡುಬಂದಲ್ಲಿ ನಿಗದಿತ ಸಮಿತಿಯಲ್ಲಿ ಸಲಹೆ ಪಡೆದು ತಕ್ಷಣ ಆರೈಕೆ ಮಾಡುವ ಬಗ್ಗೆ ಪೂರ್ವಾಭ್ಯಾಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಪೂರ್ವಾಭ್ಯಾಸ ನಂತರ ಅಲ್ಪಾವಧಿಯ ಯೋಜನೆಯನ್ನು ಸಹ ರೂಪಿಸಲಾಗುತ್ತದೆ. ನಿಗದಿತ ಸಿಬ್ಬಂದಿಗಳನ್ನು ಗುರುತಿಸಿ ಸೂಕ್ತ ಸೌಕರ್ಯಗಳ ವ್ಯವಸ್ಥೆ ಮತ್ತು ಇನ್ನೀತರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರು (ಫ್ರಂಟ್ ಲೈನ್ ವರ್ಕರ್ಸ್) ಗುರುತಿಸಲಾಗಿದೆ. ಮೂರನೇ ಹಂತದಲ್ಲಿ ಬಹುಸಂಖ್ಯಾತ ಜನಸಂಖ್ಯೆಯನ್ನು ಗುರುತಿಸಲಿದ್ದು, ಮತದಾನ ಕೇಂದ್ರ ರೂಪದಲ್ಲಿ ಲಸಿಕಾ ಕೇಂದ್ರಗಳ ಸ್ಥಾಪನೆ ಮತ್ತು ಸರ್ಕಾರದಿಂದ ನೀಡಲಾಗುವ ಮಾನದಂಡಗಳ ಆಧಾರದ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಡಾ,ಲಕ್ಕನ್ನವರ್, ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ಎಂ.ಬಿ ಬಿರಾದಾರ, ಡಬ್ಲೂಎಚ್‍ಒ ಪ್ರತಿನಿಧಿ ಮುಕುಂದ ಗಲಗಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ ನಾಗರಬೆಟ್ಟ, ಟಿಎಚ್‍ಒ ಡಾ.ಕವಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.