ಕೋವಿಡ್-19 ಲಸಿಕೆ ಪಡೆಯಲು ಶೀಲವಂತ ಸಲಹೆ

ಕಲಬುರಗಿ:ಎ.1: ಗುಲಬರ್ಗಾ ವಿಶ್ವವಿದ್ಯಾಲಯ, ಗುರೂಜಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಎನ್‍ಎಸ್‍ಎಸ್ ಘಟಕ ಸಂಯುಕ್ತಾಶ್ರಯದಲ್ಲಿ ನಗರದ ಬಸವೇಶ್ವರ ಕಾಲೋನಿ ಮತ್ತು ಆದರ್ಶ ನಗರಗಳಲ್ಲಿ ಕೋವಿಡ್-19 ಕುರಿತು ಜಾಗೃತಿ ಅಭಿಯಾನ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮ ನಡೆಯಿತು.

ಗುರೂಜಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ ಅವರು ಮಾತನಾಡಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಮಾಸ್ಕ್ ಬಳಸಬೇಕು. ಪರಸ್ಪರರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇದರಿಂದ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿ ನಿತ್ಯ ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಮುಖ್ಯವಾಗಿ ಸ್ಯಾನಿಟೈಜರ್ ಬಳಸುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ಬಸವೇಶ್ವರ ಕಾಲೋನಿ ಮತ್ತು ಆದರ್ಶ ನಗರಗಳ ಜನರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಯಿತು. ನಂತರ ಮನೆ ಮನೆಗೆ ತೆರಳಿ ಸುಮಾರು 250 ಮಾಸ್ಕ್‍ಗಳನ್ನು ಜನರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗುರೂಜಿ ಪದವಿ ಮಹಾ ವಿದ್ಯಾಲಯದ ಎನ್‍ಎಸ್‍ಎಸ್ ಸಮನ್ವಯಾಧಿಕಾರಿ ಕು.ಸಬಿಹಾ ಹೆಚ್.ಎಸ್., ಉಪನ್ಯಾಸಕರಾದ ಜ್ಯೋತಿ ರಂಗದಾಳ, ತ್ರಿಶಿಲಾದೇವಿ, ಸವಿತಾ, ಶ್ರಾವಣಿ, ಮಹಾನಂದಾ, ಅರ್ಚನಾ ಪಾಟೀಲ್, ಜ್ಯೋತಿ ಹಿರೇಮಠ, ಸುಮನ್, ಉಷಾ, ಶಾಂತಪ್ಪಾ, ವಸಿಮ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.