ಕೋವಿಡ್-19 ಲಸಿಕೆಯ ಡ್ರೈ ರನ್:ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಪರಿಶೀಲನೆ

ಕಲಬುರಗಿ,ಜ.2:ಕಲಬುರಗಿ ಜಿಲ್ಲೆಯ ಮೂರು ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುವ ವಿಧಾನದ ಕುರಿತು ಶನಿವಾರ “ಡ್ರೈ ರನ್” ನಡೆಸಲಾಯಿತು. ಕಲಬುರಗಿ ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಲಬುರಗಿ ತಾಲೂಕಿನ ಅವರಾದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜೇವರ್ಗಿ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ವಿಧಾನದ ಬಗ್ಗೆ ಪೂರ್ವಭ್ಯಾಸ ನಡೆಸಲಾಯಿತು.

ಕಲಬುರಗಿ ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಭೇಟಿ ನೀಡಿ ಡ್ರೈ ರನ್ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ, ಆರ್.ಸಿ.ಹೆಚ್ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ ಸೇರಿದಂತೆ ಮತ್ತಿತರರು ಇದ್ದರು.

 ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಲಸಿಕೆ ಬರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಜನಸಾಮಾನ್ಯರ ಮೇಲೆ ಲಸಿಕೆ ಪ್ರಯೋಗ ಮಾಡುವ ಮುನ್ನ ಮೊದಲ ಹಂತದಲ್ಲಿ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಕಾರ್ಯಕರ್ತೆಯರಿಗೆ, ನಂತರದ ಪೊಲೀಸ್ ಇಲಾಖೆ ಸೇರಿದಂತೆ ಪೌರ ಕಾರ್ಮಿಕರು, ಯೋಧರ ಮೇಲೆ ಲಸಿಕೆ ಪ್ರಯೋಗಿಸಿ ಬಳಿಕ 50 ವರ್ಷದೊಳಗಿನ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಹೆಚ್‍ಐವಿ ಕಾಯಿಲೆ ಇರುವವರಿಗೆ ಲಸಿಕೆ ನೀಡಲಾಗುತ್ತದೆ. ಇದಲ್ಲದೇ 50 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಕೊನೆಯಲ್ಲಿ ಇತರೆ ಜನಸಾಮಾನ್ಯರ ಮೇಲೆ ಲಸಿಕೆ ಪ್ರಯೋಗ ಮಾಡಲು ಉದ್ದೇಶಿಸಲಾಗಿದೆ.