ಕೋವಿಡ್-19 ಲಸಿಕಾ ಉತ್ಸವಕ್ಕೆ ಡಿಸಿ ಚಾಲನೆ

ತುಮಕೂರು, ಏ. ೧೧- ಕೊರೊನಾ ೨ನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-೧೯ ಲಸಿಕಾ ಉತ್ಸವಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಏ. ೧೪ರ ವರೆಗೆ ಹಮ್ಮಿಕೊಳ್ಳಲಾಗಿರುವ ಕೋವಿಡ್-೧೯ ಲಸಿಕಾ ಉತ್ಸವವನ್ನು ಜ್ಯೋತಿ ಬೆಳಗುವುದರ ಮೂಲಕ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರಧಾನಮಂತ್ರಿಗಳುದೇಶಾದ್ಯಂತ ಏ. ೧೧ ರಿಂದ ೧೪ರ ವರೆಗೆ ಲಸಿಕಾ ಉತ್ಸವ ನಡೆಸಲು ನಿರ್ದೇಶನ ನೀಡಿದ್ದಾರೆ. ಅದರಂತೆ ರಾಜ್ಯದಲ್ಲೂ ಲಸಿಕಾ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದ್ದು, ಇದರ ಭಾಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ ಎಂದರು.
೪೫ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್-೧೯ ಲಸಿಕೆ ತೆಗೆದುಕೊಳ್ಳ ಬೇಕು. ಲಸಿಕೆ ಪಡೆಯು ವುದರಿಂದ ಯಾವುದೇ ದುಷ್ಪರಿಣಾಮ ಇಲ್ಲ. ಈಗಾಗಲೇ ಪ್ರಧಾನಮಂತ್ರಿ ಸೇರಿದಂತೆ ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.
ಮೊದಲನೇ ಡೋಸ್ ಮತ್ತು ೨ನೇ ಡೋಸ್ ಎರಡನ್ನು ಪಡೆಯುವುದರಿಂದ ಜನರಲ್ಲಿ ಇದರ ಬಗ್ಗೆ ವಿಶ್ವಾಸ ಮೂಡಿ ಕೋವಿಡ್- ೧೯ ಮಹಾಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಯಶಸ್ವಿಯಾಗಬಹುದು ಎಂದು ಅವರು ಹೇಳಿದರು.
೪೫ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಯಾವುದೇ ರೀತಿಯ ಭಯ ಪಡದೆ ಲಸಿಕಾ ಕೇಂದ್ರಗಳಿಗೆ ಬಂದು ಮುಂಜಾಗ್ರತಾ ಕ್ರಮವಾಗಿ ಕೋವಿಡ್-೧೯ ಲಸಿಕೆ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಇದಾದ ಬಳಿಕ ಜಿಲ್ಲಾಧಿಕಾರಿಗಳು ಲಸಿಕೆ ಪಡೆಯಲು ಬಂದಿದ್ದವರ ಆಧಾರ್ ಕಾರ್ಡ್ ಎಂಟ್ರಿ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ, ವೈದ್ಯರಿಂಗ ಮಾಹಿತಿ ಪಡೆದು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಕೋವಿಡ್-೧೯ ಲಸಿಕಾ ಉತ್ಸವವನ್ನು ಅತ್ಯಂತ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗುವಂತೆ ಹಾಗೂ ಲಸಿಕೆ ಪಡೆಯುವ ಸಂಬಂಧ ಸಾರ್ವಜನಿಕರಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರ ಮೂಲಕ ಅರಿವು ಮೂಡಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‌ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್‌ಬಾಬು, ಆರ್‌ಎಂಓ ಡಾ. ವೀಣಾ, ಪಾಲಿಕೆ ಆಯುಕ್ತೆ ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಟರಾಜು, ಡಾ. ಕೇಶವರಾಜು, ಡಾ. ಸನತ್‌ಕುಮಾರ್, ಡಾ. ಮೋಹನ್‌ದಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್, ಡಾ. ಹಂಸ, ಆರ್.ಐ. ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.