ಕೋವಿಡ್-19 ರೋಗಿಗಳಿಗಾಗಿ ಶೇ 50 ರಷ್ಟು ಬೆಡ್ ಸರ್ಕಾರಿ ಕೋಟಾದಡಿ ಕಾಯ್ದಿರಿಸಿಃ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್

ವಿಜಯಪುರ, ಜೂ.3-ರಾಜ್ಯ ಸರ್ಕಾರದಿಂದ ಅಭಿವೃದ್ಧಿಪಡಿಸಿದ ಬೆಡ್ ಮ್ಯಾನೇಜಮೆಂಟ್ ಸಿಸ್ಟಮ್ ಅಡಿ ಕೋವಿಡ್-19 ಚಿಕಿತ್ಸೆಗೆ ಹಂಚಿಕೆ ಮಾಡಲಾದ ಬೆಡ್ ಪೈಕಿ ಶೇ.50ರಷ್ಟು ಹಾಸಿಗೆ ಸರ್ಕಾರಿ ಕೋಟಾದಡಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆ ಮುಖ್ಯಸ್ಥ ರು,ವೈದ್ಯಾಧಿಕಾರಿಗಳು,ಚಿಕ್ಕ ಮಕ್ಕಳ ತಜ್ಞ,ವೈದ್ಯರು, ಇಂಡಿಯನ್ ಅಕ್ಯಾಡೆಮಿ ಆಫ್ ಪಿಡಿಯಾಟ್ರಿಕ್ಸ, ಅಧ್ಯಕ್ಷರು, ಐ ಎಮ್ ಎ ಅಧ್ಯಕ್ಷರೊಂದಿಗೆ ಕೋವಿಡ್ 3 ನೇ ಅಲೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನಡೆಸಿದ ಅವರು, 3 ನೇ ಅಲೆ ಅಂಗವಾಗಿ ಅವಶ್ಯಕ ಸಕಲ ಸಿದ್ಧತೆ ಮಾಡಿಕೊಳ್ಳುವ ಜೊತೆಗೆ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೇಲಿನಂತೆ ಕಡ್ಡಾಯವಾಗಿ ಶೇ. 50ರಷ್ಟು ಬೆಡ್ ಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದ್ದಾರೆ.
ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗಾಗಲಿ, ಸೋಂಕಿತರಿಗಾಗಲಿ ವೆಂಟಿಲೇಟರ್, ಆಕ್ಸಿಜನ್ ಮತ್ತು ಬೆಡ್‍ಗಳ ಕೊರತೆಯಾಗದಂತೆ ಯೋಜನೆ ರೂಪಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಕೋವಿಡ್ ಜೊತೆಗೆ ಕೋವಿಡಯೇತರ ರೋಗಿಗಳಿಗೂ ಆದ್ಯತೆ ಮೇಲೆ ಚಿಕಿತ್ಸೆ ಒದಗಿಸಬೇಕು. ಈವರೆಗೆ ಎ.ಬಿ.ಎ.ಆರ್. ಕೆ ಅಡಿ ಎನ್ರೋಲ್ ಮಾಡಿಕೊಳ್ಳದೆ ಬಾಕಿ ಉಳಿದಿರುವ ಖಾಸಗಿ ಆಸ್ಪತ್ರೆಗಳು ತಕ್ಷಣ ಎನ್ರೋಲ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದರು.
ಕೋವಿಡ್ ಕರ್ತವ್ಯ ಕಾರಣವಾಗಿಟ್ಟುಕೊಂಡು ಕೋವಿಡ್ ಯೇತರ ರೋಗಿಗಳ ನಿರ್ಲಕ್ಷ ವಾಗಬಾರದು. ಈವರೆಗೆ ಜಿಲ್ಲಾಡಳಿತದೊಂದಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರ ಸಹಕಾರದಿಂದಾಗಿ ರಾಜ್ಯದಲ್ಲಿಯೇ ಕೋವಿಡ್ ಸಾವು ನಿಯಂತ್ರಣ, ಕೋವಿಡ್ ಸೋಂಕು ಪ್ರಮಾಣ ಕಡಿತವಾಗಿದೆ. ಆಕ್ಸಿಜನ್ ಮತ್ತು ರೆಮಡಿಸಿವರ ಸಮರ್ಪಕ ನಿರ್ವಹಣೆಯಿಂದಾಗಿ ರಾಜ್ಯದಲ್ಲಿಯೇ ನಾವು ಮುಂಚೂಣಿಯಲ್ಲಿ ಇದ್ದೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ಆದ್ಯತೆ ಮೇಲೆ ಚಿಕಿತ್ಸೆ ಒದಗಿಸಬೇಕು. ರೋಗಿಗಳ ಕ್ರಿಟಿಕಲ್ ಸಂದರ್ಭದಲ್ಲಿ ಮಾತ್ರ ಇತರೆ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕು. ಸಂಶೋಧನಾತ್ಮಕ ರೀತಿಯಲ್ಲಿ ಇಂತಹ ರೋಗಿಗಳಿಗೆ ಚಿಕಿತ್ಸಾ ವಿಧಾನ ಒದಗಿಸಬೇಕು ಎಂದು ಅವರು ಸೂಚನೆ ನೀಡಿ ಸದ್ಯ ಬಿ .ಎಲ್. ಡಿ. ಇ ಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಯಶೋಧ ಆಸ್ಪತ್ರೆಯ ಮೂಲಕವು ನುರಿತ ವೈದ್ಯರು ಮತ್ತು ಸೌಕರ್ಯಗಳೊಂದಿಗೆ ಚಿಕಿತ್ಸೆ ಒದಗಿಸಲು ಸಲಹೆ ನೀಡಿದರು.
ಸಭೆಯಲ್ಲಿ ಈವರೆಗೆ ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ನೀಡಿರುವ ಸಹಕಾರಕ್ಕೆ ಖಾಸಗಿ ಆಸ್ಪತ್ರೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದರು, ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರು ನೀಡಿದ ದೂರಿನ ಹಿನ್ನೆಲೆ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು ಖಾಸಗಿ ನಸಿರ್ಂಗ್ ಹೋಮ್ ನಡೆಸುತ್ತಿರುವ ಬಗ್ಗೆ ಪರಿಶೀಲನಾ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ಈವರೆಗೆ ಸಾಂಘಿಕ ಪ್ರಯತ್ನ, ಸಮನ್ವಯತೆ ಖಾಸಗಿ ಆಸ್ಪತ್ರೆಗಳ ಸಹಕಾರದಿಂದ ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದು, ರಾಜ್ಯದಲ್ಲಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಬೆಂಗಳೂರು, ಮಹಾರಾಷ್ಟ್ರ, ಬೆಳಗಾವಿ, ಹುಬ್ಬಳ್ಳಿ ಮತ್ತು ಇತರೆ ಜಿಲ್ಲೆಗಳ ರೋಗಿಗಳು ಕೂಡ ವಿಶ್ವಾಸದಿಂದ ಇಲ್ಲಿ ಚಿಕಿತ್ಸೆ ಪಡೆದಿರುವುದು ಜಿಲ್ಲೆಯು ವೈದ್ಯಕೀಯ. ಸಾಧನೆಯಪ್ರತಿಕ ಇದಾಗಿದೆ,ಮುಂದಿನ ದಿನಗಳಲ್ಲಿಯೂ ಎಲ್ಲ ವೈದ್ಯರ ಸಹಕಾರವಿರಲಿ ಎಂದು ಹಾರೈಸಿದರು.
ಕೆಲವು ಆಸ್ಪತ್ರೆಗಳ ಮುಖ್ಯಸ್ಥರು ವೈದ್ಯಾಧಿಕಾರಿಗಳು ಈ ಮೂರನೇ ಅಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದರು.
ಬಿ ಎಲ್ ಡಿ ಇ ಸಂಸ್ಥೆ ವಿಜಯಪುರಃ 3 ನೇ ಅಲೆ ಬರುವ ಸಂಭವನೀಯತೆ ಇದ್ದು ಅದಕ್ಕೆ ಎಲ್ಲ ರೀತಿಯ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಳ್ಳುವುದು ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷರು ಇಂಡಿಯನ್ ಅಕಾಡೆಮಿ ಆಫ್ ಪೇಡಿಯಾಟ್ರಿಕ್ಸ್‍ಃ ಮೂರನೇ ಅಲೆ ಬರುವ ಸಂಭವನೀಯತೆ ತೀರಾ ಕಡಿಮೆ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿ, ಕೆಲವು ಸರ್ಕಾರಿ ವೈದ್ಯರು ತಮ್ಮ ಸ್ವಂತ ಖಾಸಗಿ ನಸಿರ್ಂಗ್ ಹೋಮ್ ಗಳನ್ನು ನಡೆಸುತ್ತಿದ್ದು, ಇದು ಕಾನೂನು ಬಾಹಿರವಾಗಿದ್ದು ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಡಾ. ಬಿದರಿ.ಅಶ್ವಿನಿ ಬಿದರಿ ಆಸ್ಪತ್ರೆಃ ಮೂರನೇ ಅಲೆಯು ಬರುವ ಸಂಭವನೀಯತೆ ಇದ್ದು, ಆದರೆ ಎರಡನೇ ಅಲೆಯಷ್ಟು ಏಕಾಏಕಿ ಒಮ್ಮೆಲೇ ಹೆಚ್ಚು ಪ್ರಕರಣಗಳು ಕಂಡು ಬರುವುದಿಲ್ಲ, ಆದರೆ ಮೂರನೇ ಅಲೆಯು ಹೆಚ್ಚಾಗಿ ಮಕ್ಕಳನ್ನು ಭಾಧಿಸುವ ಸಾಧ್ಯತೆ ಇದ್ದು, ಇದಲ್ಲದೆ ಮಕ್ಕಳ ಚಿಕಿತ್ಸೆಯ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರ್ಕಾರದಿಂದ ಚಿಕಿತ್ಸಾ ದರವನ್ನು ಸೂಕ್ತ ರೀತಿಯಲ್ಲಿ ನಿಗದಿಪಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಮದರಕಿ. ಯಶೋಧ ಆಸ್ಪತ್ರೆ ವಿಜಯಪುರಃ ಮೂರನೇ ಅಲೆಯು 5- 6 ತಿಂಗಳ ನಂತರ ಸಂಭವನೀಯತೆ ಇದ್ದು, ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿರುವ ಪ್ರಕರಣಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು ಹಾಗೂ ಕಾಲಕಾಲಕ್ಕೆ ಈ ರೀತಿಯ ಸಭೆಗಳನ್ನು ಜರುಗಿಸಿ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚಿಸುವುದು ತೀರಾ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ್, ಉಪವಿಭಾಗಾಧಿಕಾರಿಗಳಾದ ರಾಹುಲ್ ಸಿಂದೆ, ಬಲರಾಮ್ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ವಿಜಯಕುಮಾರ್ ಅಜುರೆ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ, ಮಹೇಂದ್ರ ಕಾಪ್ಸೆ ಸ್ವಾಗತಿಸಿ ಕೊನೆಗೆ ವಂದಿಸಿದರು.