ಕೋವಿಡ್-19 ಪರೀಕ್ಷೆ ಪ್ರಮಾಣ ಹೆಚ್ಚಿಸಿ, ತಡೆಗೆ ಸಿದ್ಧರಾಗಿ

ಚಿತ್ರದುರ್ಗ, ಏ.2; ಕೋವಿಡ್-19 ಎರಡನೇ ಅಲೆ ಪ್ರಾರಂಭದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸರ್ವಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಂ.ದೀಪಾ ಸೂಚನೆ ನೀಡಿದರು.
 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಸ್ವಯಂ ಪ್ರೇರಿತವಾಗಿ ಮೊಬೈಲ್ ತಂಡದ ಮೂಲಕ ಜನಸಂದಣಿ ಹಾಗೂ ಜನ ಸಂಚಾರ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿನಿತ್ಯವೂ ಜಿಲ್ಲೆಯಲ್ಲಿ 1600 ಜನರ ಗಂಟಲು, ಮೂಗು ದ್ರವ ಸಂಗ್ರಹಿಸುವ ಗುರಿ ಸಾಧಿಸಬೇಕು. ಹೆಚ್ಚು ಕೋವಿಡ್ ಪರೀಕ್ಷೆ ಮಾಡುವುದರ ಮೂಲಕ ಕೋವಿಡ್-19 ತಡೆಗಟ್ಟಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಕಡಿಮೆ ಇದೆ. ಕಳೆದ ಜನವರಿ ಮಾಹೆಯಲ್ಲಿ 429, ಫೆಬ್ರವರಿ 194 ಹಾಗೂ ಮಾರ್ಚ್ ತಿಂಗಳಲ್ಲಿ 288 ಪ್ರಕರಣಗಳು ಕಂಡು ಬಂದಿದೆ. ಈಗ 54 ಸಕ್ರಿಯ ಪ್ರಕರಣಗಳು ಇವೆ. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಬೇಕಾದ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ, ವೆಂಟಿಲೇಟರ್, ಔಷಧ ಸೇರಿದಂತೆ ಕಳೆದ ವರ್ಷದಂತೆ ಎಲ್ಲ ರೀತಿಯಲ್ಲೂ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವಿದ್ಯಾರ್ಥಿಗಳನ್ನು ಮಾತ್ರವಲ್ಲದೇ ಲಾರಿ ಚಾಲಕರು, ಪ್ರವಾಸಿ ಸ್ಥಳಗಳಿಗೆ ಆಗಮಿಸುವ ಪ್ರವಾಸಿಗರು ಸೇರಿದಂತೆ ಹೊರ ರಾಜ್ಯಗಳಿಂದ ಬರುವ ಪ್ರತಿಯೊಬ್ಬರ ಮೇಲೆ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.
ಲಸಿಕೆ ಗುರಿ ಹೆಚ್ಚಳವಾಗಲಿ:  ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ನಿಗಧಿತ ಗುರಿ ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ ಸೂಚನೆ ನೀಡಿದರು.
 ಇದಕ್ಕೆ ಆರ್.ಸಿ.ಹೆಚ್. ಅಧಿಕಾರಿ ಡಾ.ಕುಮಾರಸ್ವಾಮಿ ಅಂಕಿ ಅಂಶಗಳನ್ನು ನೀಡಿ ಜಿಲ್ಲೆಯ 11,000 ಆರೋಗ್ಯ ಕಾರ್ಯಕರ್ತರಲ್ಲಿ 10,747 ಮಂದಿಗೆ ಲಸಿಕೆ ನೀಡಲಾಗಿದೆ. ಪ್ರೆಂಟ್‍ಲೈನ್ ವರ್ಕರ್‍ಗಳಾದ ಪೊಲೀಸ್, ಕಂದಾಯ, ಆರ್‍ಡಿಪಿರ್ ಇಲಾಖೆ ಸೇರಿದಂತೆ ಸುಮಾರು 7938 ಮಂದಿಗೆ ಲಸಿಕೆ ನೀಡಲಾಗಿದೆ. ಇದರ ಜೊತೆಗೆ ಏಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟ 4.25 ಲಕ್ಷ ಜನರು ಹಾಗೂ 65 ವರ್ಷ ಮೇಲ್ಪಟ್ಟ 1.47 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ನಿಗಧಿಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಉಪವಿಭಾಗಾಧಿಕಾರಿ ಪ್ರಸನ್ನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾಂವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹಮದ್ ಮುಬಿನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.