ಕೋವಿಡ್-19 ಡೋಸ್ ಹೆಚ್ಚಳ ಉದ್ದೇಶ: ಪ್ರಮುಖ ನಿರ್ಣಯ ಜಾರಿಗೆ ಕ್ರಮ

ಬೀದರ ನ.30: ಬೀದರ ಜಿಲ್ಲೆಯಲ್ಲಿ ಕೋವಿಡ್-19 ಡೋಸ್ ಹೆಚ್ಚಳ ಮಾಡಲು ಜಿಲ್ಲಾಡಳಿತವು ಬಿಗಿಕ್ರಮಕ್ಕೆ ಮುಂದಾಗಿದೆ.

ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 29ರಂದು ಸಂಜೆ ನಡೆದ ವಿಡಿಯೋ ಸಂವಾದ ಸಭೆಯಲ್ಲಿ, ಜಿಲ್ಲೆಯಲ್ಲಿ ಕೋವಿಡ್-19 ಡೋಸ್ ನೀಡಿಕೆ ಗುರಿ ಸಾಧನೆ ಕ್ರಮದ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಇನ್ಮೇಲೆ ಬಸ್ ಪ್ರಯಾಣಕ್ಕೆ ಕೋವಿಡ್ ಲಸಿಕಾ ಪ್ರಮಾಣಪತ್ರ ಕಡ್ಡಾಯಗೊಳಿಸಿ, ಜಿಲ್ಲೆಯ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಮಾಣ ಪತ್ರ ತಪಾಸಣೆಗೆ ವ್ಯವಸ್ಥೆ ಮಾಡಬಹುದು ಎಂದು ಸಭೆಗೆ ವೈದ್ಯಾಧಿಕಾರಿ ಶರಣಯ್ಯ ಸ್ವಾಮಿ ಸಲಹೆ ಮಾಡಿದರು.

ಬಸವಕಲ್ಯಾಣದಲ್ಲಿ ಪೆಟ್ರೋಲ್ ಬಂಕ್ ಸಂಘದವರ ಸಹಕಾರ ಪಡೆದುಕೊಂಡು ಬಂಕ್‍ನ ಎಲ್ಲ ಸಿಬ್ಬಂದಿಗೆ ಲಸಿಕೆ ಕೊಡಿಸಲಾಯಿತು. ಅದೇ ಮಾದರಿಯಲ್ಲಿ ಬಂಕ್‍ಗೆ ಡಿಸೈಲ್, ಪೆಟ್ರೋಲ್ ಹಾಕಿಸಲು ಬರುವವರಿಗೆ ಕೋವಿಡ್-19 ಪ್ರಮಾಣಪತ್ರ ಕಡ್ಡಾಯ ತಪಾಸಣಾ ವ್ಯವಸ್ಥೆ ಮಾಡುವುದನ್ನು ಜಿಲ್ಲೆಯಾದ್ಯಂತ ವಿಸ್ತರಿಸಬಹುದಾಗಿದೆ ಎಂದು ಸಹಾಯಕ ಆಯುಕ್ತರಾದ ಭುವನೇಶ ಪಾಟೀಲ್ ಸಲಹೆ ಮಾಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಕಾರ ಪಡೆದು, ವಾಹನ ತಪಾಸಣೆ ವೇಳೆ ವ್ಯಾಕ್ಷಿನ್ ಸರ್ಟಿಫಿಕೇಟ್ ತಪಾಸಣೆಯನ್ನು ಕೂಡ ಕಡ್ಡಾಯಗೊಳಿಸಬೇಕು ಎಂದು ಕೆಲವು ಅಧಿಕಾರಿಗಳು ಸಲಹೆ ಮಾಡಿದರು. ಬಾರ್ಡರ್ ಚೆಕ್‍ಪೋಸ್ಟಗಳಲ್ಲಿ ವ್ಯಾಕ್ಷಿನ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ. ಇದರಿಂದ ಪ್ರತಿ ದಿನ ಬಾರ್ಡರ್‍ನಲ್ಲಿ ಪ್ರತಿದಿನ ಉತ್ತಮ ರೀತಿಯಲ್ಲಿ ಕೋವಿಡ್ ಡೋಸ್ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಸಲಹೆ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಕೋವಿಡ್-19 ಲಸಿಕೆಯ ಲಭ್ಯತೆ ಇರುತ್ತದೆ. ಸಭೆಯಲ್ಲಿ ತಿಳಿಸಿದ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ವಿವಿಧ ಸಂಘ-ಸಂಸ್ಥೆಗಳ ಸಹಕಾರ ಪಡೆದುಕೊಳ್ಳೋಣ ಎಂದರು.

ಗ್ರಾಪಂವಾರು ಲಸೀಕಾಕರಣ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಗ್ರಾಪಂವಾರು ಆದೇಶ ಮಾಡಿ, ಲಸೀಕಾಕರಣ ಕಡಿಮೆ ಆಗಿರುವ ಕಡೆ ಒಬ್ಬರನ್ನು ನೋಡಲ್ ಅಧಿಕಾರಿ ಎಂದು ನೇಮಿಸಿ ಲಸೀಕಾಕರಣ ತೀವ್ರಗೊಳಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಮಟ್ಟದಲ್ಲಿ ಕೂಡ ಪ್ರತಿ ದಿನ ಕೋವಿಡ್ ಲಸಿಕೆಗೆ ಒತ್ತು ಕೊಡಬೇಕು ಎಂದು ಎಲ್ಲ ಪಿಡಿಓಗಳಿಗೆ ತಿಳಿಸಲಾಗಿದೆ. ಈ ಮೇಲುಸ್ತುವಾರಿ ಜವಾಬ್ದಾರಿಯನ್ನು ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ತಿಳಿಸಿದರು.

30,000 ಲಸಿಕಾ ಗುರಿ ನಿಗದಿ: ನವೆಂಬರ್ 30ರಂದು ಕೂಡ ಬೀದರ ಜಿಲ್ಲೆಯಾದ್ಯಂತ 30,000 ಡೋಸ್ ಹಾಕಿಸಲು ಜಿಲ್ಲಾಧಿಕಾರಿಗಳು ಗುರಿ ನಿಗದಿಪಡಿಸಿದರು. ಮೊದಲನೇ ಡೋಸ್ ಹಾಕಿಸಲು ಬೀದರಗೆ 3,000, ಭಾಲ್ಕಿ, ಬಸವಕಲ್ಯಾಣ ಮತ್ತು ಔರಾದ್‍ಗೆ ತಲಾ 2500 ಡೋಸ್ ಹಾಕಿಸಲು ಜಿಲ್ಲಾಧಿಕಾರಿಗಳು ಗುರಿ ನಿಗದಿಪಡಿಸಿದರು.

ಸಭೆಯಲ್ಲಿ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮೋತಿಲಾಲ್ ಲಮಾಣಿ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಅಜಯ್‍ಕುಮಾರ, ಬೀದರ ತಹಸೀಲ್ದಾರ ಶಕೀಲ್ ಮಹ್ಮದ್, ಡಿಎಚ್‍ಓ ಡಾ.ವಿ.ಜಿ.ರೆಡ್ಡಿ, ಡಿಎಸ್‍ಓ ಡಾ.ಕೃಷ್ಣಾವರೆಡ್ಡಿ, ವೈದ್ಯಾಧಿಕಾರಿಗಳಾದ ಮಹೇಶ ಬಿರಾದಾರ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ ಹಾಗೂ ಇತರರು ಇದ್ದರು.