ಕೋವಿಡ್-19:ವಿಶೇಷ ಜಾಗೃತಿ ಪ್ರಚಾರಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಕಲಬುರಗಿ: ನ.14: ಕೋವಿಡ್-19 ಹಿನ್ನೆಲೆಯಲ್ಲಿ ಕೊರೋನಾ ವೈರಸ್ ತಡೆಗಟ್ಟುವ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಎಲ್.ಇ.ಡಿ. ವಾಹನಗಳ ಮೂಲಕ ಕೈಗೊಂಡಿರುವ ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ರೀಮತಿ ವಿ.ವಿ. ಜ್ಯೋತ್ಸ್ನಾ ಅವರು ಹಸಿರು ನಿಶಾನೆ ತೋರಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು (ಶನಿವಾರ) ಚಾಲನೆ ನೀಡಿ ಮಾತನಾಡಿದ ಅವರು, ಮಹಾಮಾರಿ ಕೊರೋನಾ ವೈರಸ್‍ನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಜನತೆ ಕೈಗೊಳ್ಳಬೇಕಾದ ಸುರಕ್ಷತಾ/ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು “ಶ್ರವ್ಯ-ದೃಶ್ಯ” ಮಾಧ್ಯಮದ ಮೂಲಕ ಬೃಹತ್ ಎಲ್‍ಇಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳನ್ನು ಬಳಸಿಕೊಂಡು ವಿಶೇಷ ಜಾಗೃತಿ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎರಡು ಎಲ್.ಇ.ಡಿ. ವಾಹನಗಳ ಮೂಲಕ ಪ್ರತಿದಿನ ಹತ್ತು ಹಳ್ಳಿಗಳಂತೆ ಪ್ರಚಾರ ಕೈಗೊಂಡು, ಜಿಲ್ಲೆಯ ಒಟ್ಟು 180 ಗ್ರಾಮಗಳಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೋವಿಡ್-19 ನಿರ್ಮೂಲನೆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಜನರು ಮಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಎಸ್. ಮಾಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ.ಜಿ.ಬಿ. ಇನ್ನಿತರರು ಇದ್ದರು.