ಕೋವಿಡ್ ೨ನೇ ಅಲೆ ಎದುರಿಸಲು ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತಾ ಕ್ರಮ: ಡಿಸಿ

ರಾಯಚೂರು,ಏ.೨೧- ಕೋವಿಡ್-೧೯ ಸೋಂಕಿನ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಜ್ಜಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ಗುಣಮುಖರಾಗಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಕೋವಿಡ್-೧೯ ಎರಡನೇ ಅಲೆ ನಿಯಂತ್ರಣ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ, ಈ ಸಂಖ್ಯೆಗಳಲ್ಲಿ ದ್ವಿಗುಣವಾದಲ್ಲೀ ಮುಂಜಾಗ್ರತಾ ಕ್ರಮವಾಗಿ ನಗರದ ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಉಪಚರಿಸಲು ಮತ್ತಷ್ಟು ಹಾಸಿಗೆಗಳನ್ನು ಸಿದ್ದಪಡಿಸಿಕಟ್ಟುಕೊಳ್ಳಬೇಕು, ಎರಡೂ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ದೊರೆಯಬಹುದಾದ ಬೆಡ್‌ಗಳ ಸಂಖ್ಯೆಯನ್ನು ತಿಳಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಒಪೆಕ್‌ನಲ್ಲಿ ಈಗಾಗಲೇ ೧೫೦ ಆಕ್ಸಿಜನ್ ಹಾಸಿಗೆಗಳು ಲಭ್ಯವಿವೆ, ಅದರಂತೆ ಅಲ್ಲಿನ ಎರಡನೇ ಮಹಡಿಯಲ್ಲಿ ೭೫ ಹಾಸಿಗೆಗಳನ್ನು ಸಿದ್ದಪಡಿಸಿಕೊಳ್ಳಲು ಅಗತ್ಯವಿರುವ ಅವಶ್ಯಕತೆಗಳನ್ನು ಕೂಡಲೇ ತಿಳಿಸುವಂತೆ ಒಪೆಕ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಾಗರಾಜ ಗದ್ವಾಲ್ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು ರಿಮ್ಸ್‌ನ ಮೂರನೇ ಮಹಡಿಯಲ್ಲಿ ೧೫೦ ಹಾಗೂ ಐದನೇ ಮಹಡಿಯಲ್ಲಿ ೧೨೦ ಹಾಸಿಗೆಗಳ ಸೌಲಭ್ಯ ಕಲ್ಪಿಸಲು ಸಾದ್ಯತೆಗಳಿದ್ದು, ಅದಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ ಅವರಿಗೆ ನಿರ್ದೇಶನ ನೀಡಿದರು.
ಕೋವಿಡ್ ಸೋಂಕಿನ ಅತಿ ಗಂಭೀರ ಪ್ರಕರಣಗಳಲ್ಲಿಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಉಳಿದಂತೆ ಒಪೆಕ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತಿದೆ, ಖಾಸಗಿ ಆಸ್ಪತ್ರೆಗಳಲ್ಲಿಯೂ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗುವುದು, ರೋಗಿಗಳ ಚಿಕಿತ್ಸೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುವ ಆಕ್ಸಿಜನ್ ಸಿಲಿಂಡರ್ ಪೂರೈಕೆಗೆ ಅತಿ ಹೆಚ್ಚಿನ ಗಮನ ನೀಡಬೇಕು, ಆಕ್ಸಿಜನ್ ಸಿಲಿಂಡರ್‌ಗಳು ಸದಾ ತುಂಬಿ ಇರುವಂತೆ ನೋಡಿಕೊಳ್ಳಬೇಕು, ಅಗತ್ಯವಿದ್ದಲ್ಲೀ ಅವುಗಳನ್ನು ಖರೀದಿಸಬೇಕು, ಕೊರೋನಾ ನಿಯಂತ್ರಿಸುವಲ್ಲಿ ಪ್ರಮುಖವಾಗಿ ರೆಮೆಡಿಸ್‌ವಿಯಾರ್ ಎಂಜಕ್ಷನ್‌ಗೆ ಅತಿ ಹೆಚ್ಚು ಬೇಡಿಕೆಯಿದೆ ಅದು ಸೇರಿದಂತೆ, ಸರ್ಕಾರಿ ಮಳಿಗೆಗಳಲ್ಲಿ ಕೊರೋನಾ ಔಷಧ ಲಭ್ಯವಿಲ್ಲದಿದ್ದಲ್ಲೀ ಖಾಸಗಿಯಾಗಿ ಖರೀದಿಸಿಟ್ಟುಕೊಳ್ಳಬೇಕು, ಇದಕ್ಕೆ ಹಣಕಾಸಿನ ಸಮಸ್ಯೆಯಿಲ್ಲ ಎಂದರು.
ಪ್ರತಿ ತಾಲೂಕು ಆಸ್ಪತ್ರೆಗೆ ೫೦ ಸಿಲಿಂಡರ್ ಆಕ್ಸಿಜನ್ ಪೂರೈಕೆ ಮಾಡಬೇಕು, ಆಂಬುಲೆನ್ಸ್ ಸದಾ ಸಿದ್ದವಾಗಿರಬೇಕು, ಅಗತ್ಯಕ್ಕೆ ತಕ್ಕ ಔಷಧಿಗಳನ್ನು ಖರೀದಿಸಿಟ್ಟುಕೊಳ್ಳಬೇಕು, ಆಸ್ಪತ್ರೆಗಳಲ್ಲಿ ಸ್ಪಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.ಲಿಂಗಸೂಗೂರು ತಾಲೂಕಿನಲ್ಲಿ ಬಾಕಿಯಿರುವ ಆಂಬುಲೆನ್ಸ್ ರಿಪೇರಿ ಕೂಡಲೇ ಆಗಬೇಕು, ಯರಮರಸ್ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಿನಕ್ಕೆ ೧೦ ರಿಂದ ೧೩ ಜನ ದಾಖಲಾಗುತ್ತಿದ್ದಾರೆ, ಅಲ್ಲಿ ನಗರಸಭೆಯಿಂದ ಸ್ಪಚ್ಛತಾ ಕಾರ್ಯವನ್ನು ನಿರ್ವಹಿಸಬೇಕು, ಅಲ್ಲಿ ಮನೋರಂಜನೆಗಾಗಿ ಟಿವಿ, ಚೆಸ್ ಬೋರ್ಡ್ ಸೇರಿದಂತೆ ಇತರೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು ಇದೇ ಸಂದರ್ಭದಲ್ಲಿ ಕೋವಿಡ್ ಲ್ಯಾಬ್ ಸಿದ್ಧತೆ, ಹೋಮ್ ಐಸೋಲೇಷನ್ ಮತ್ತು ಕೋವಿಡ್ ದಂಡ ವಿಧಿಸಿದ ಪ್ರಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಚರ್ಚೆ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಕೆ.ಎಚ್. ದುರುಗೇಶ್, ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು, ಆರ್.ಸಿ.ಎಚ್ ಅಧಿಕಾರಿ ಡಾ. ವಿಜಯ ಸೇರಿದಂತೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.