ಕೋವಿಡ್ ೨ನೇ ಅಲೆ ಆರ್ಥಿಕ ಚಟುವಟಿಕೆಗೆ ಭಂಗವಿಲ್ಲ

ನವದೆಹಲಿ, ಏ. ೬- ದೇಶಾದ್ಯಂತ ಕೊರೊನಾ ಸೋಂಕಿನ ಪ್ರಮಾಣ ಏರುಗತಿಯಲ್ಲಿ ಸಾಗಿದೆ. ನಿನ್ನೆ ಒಂದೇ ದಿನದಲ್ಲಿ ೧ ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಕೆಲವೆಡೆ ಭಾಗಶಃ ಲಾಕ್‌ಡೌನ್‌ನಂತಹ ಕ್ರಮಗಳು ಕೈಗೊಳ್ಳಲಾಗುತ್ತಿದೆ. ಇದರಿಂದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಎದುರಾಗಿದೆ.
ಎಂತಹ ಸನ್ನಿವೇಶ ಎದುರಾದರೂ ಆರ್ಥಿಕತೆ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಲಾಗಿದೆ ಎಂದು ಹೇಳಿದೆ. ಚೇತರಿಕೆ ಹಾದಿಯಲ್ಲಿದೆ,
ಎಂತಹ ಸ್ಥಿತಿ ಎದುರಾದರೂ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ತಿಳಿಸಿದ್ದಾರೆ.
’ಮೊದಲ ಹಂತದ ಕೊರೊನಾ ಅಲೆಯ ವೇಳೆ ಅತ್ಯಂತ ಪರಿಣಾಮಕಾರಿಯಾಗಿ ಆರ್ಥಿಕ ಸವಾಲುಗಳನ್ನು ನಿರ್ವಹಿಸಲಾಗಿದೆ. ಈ ಅನುಭವದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕೋವಿಡ್ ಎರಡನೇ ಅಲೆಯ ವೇಳೆ, ಆರ್ಥಿಕ ವ್ಯವಸ್ಥೆ ನಿರ್ವಹಿಸಲಾಗುವುದು. ವ್ಯಾಕ್ಸಿನ್ ನೀಡುವಿಕೆ ಚುರುಕುಗೊಳಿಸಲಾಗಿದೆ’ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಎರಡನೇ ಅಲೆ ಪ್ರಾರಂಭದಲ್ಲಿ, ಕೊರೊನಾದ ಎಲ್ಲಾ ಪರಿಸ್ಥಿತಿ ಎದುರಿಸಲು ಭಾರತ ಸಜ್ಜಾಗಿದೆ. ಆರೋಗ್ಯ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ. ಆರ್ಥಿಕ ಚಟುವಟಿಕೆಯು ಸಾಂಕ್ರಾಮಿಕಕ್ಕೆ ಹೊಂದಿಕೊಂಡಿದೆ. ಚುಚ್ಚುಮದ್ದಿನ ವೇಗವರ್ಧನೆಯಿಂದ ಈ ನಿರೀಕ್ಷೆಯು ಮತ್ತಷ್ಟು ಹೆಚ್ಚಾಗಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಮಾಸಿಕ ಆರ್ಥಿಕ ವಿಮರ್ಶೆ ಹೇಳಲಾಗಿದೆ.
ಹೆಚ್ಚಳ:
ಮೊನ್ನೆ ೧ ಲಕ್ಷ ಕೊರೊನಾ ಸೊಂಕಿತ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಶೇ. ೫೦ ರಷ್ಟು ಪ್ರಕರಣಗಳು ಮಹಾರಾಷ್ಟ್ರವೊಂದರಲ್ಲಿ ಕಾಣಿಸಿಕೊಂಡಿವೆ. ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ, ಮಹಾರಾಷ್ಟ್ರ ರಾಜ್ಯದಲ್ಲಿ ಭಾಗಶಃ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್‌ಗಳ ಬಾಗಿಲು ಮುಚ್ಚಲಾಗಿದೆ. ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.