ಕೋವಿಡ್ ೨ನೇ ಅಲೆಗೆ ಮಹಾ ತತ್ತರ

ಮುಂಬೈ, ಮಾ. ೨೩- ಕೋವಿಡ್-೧೯ ಎರಡನೇ ಅಲೆಗೆ ಮಹಾರಾಷ್ಟ್ರ ತತ್ತರಗೊಂಡಿದೆ. ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ೧೦ ಲಕ್ಷ ಹೆಚ್ಚು ಜನರಿಗೆ ಕೋವಿಡ್ ರೋಗ ಲಕ್ಷಣ ಕಾಣಿಸಿಕೊಂಡಿದೆ.

ಈ ಬಗ್ಗೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಒಟ್ಟು ೧೦,೬೩,೦೭೭ ಮಂದಿಗೆ ಕೋವಿಡ್ ರೋಗ ಲಕ್ಷಣವಿದ್ದು, ಅವರನ್ನು ಹೋಂ ಕ್ವಾರಾಂಟೈನ್ ನಲ್ಲಿ ಇರಿಸಲಾಗಿದೆ. ಈ ಪೈಕಿ ೧೧,೦೯೨ ಮಂದಿ ಕ್ವಾರಾಂಟೈನ್ ನಲ್ಲಿದ್ದು, ಇವರ ಮೇಲೆ ನಿಗಾ ಇರಿಸಲಾಗಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೪,೬೪೫ ಸೋಂಕು ಪ್ರಕರಣಗಳು ವರದಿಯಾಗಿದೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೨೫,೦೪,೩೨೭ಕ್ಕೆ ಏರಿಕೆಯಾಗಿದೆ. ಅಂತೆಯೇ ಕೋವಿಡ್-೧೯ ಸೋಂಕಿಗೆ ಬಲಿಯಾದವರ ಸಂಖ್ಯೆ ೫೩,೪೫೭ಕ್ಕೆ ಏರಿಕೆಯಾಗಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ೧೯,೪೬೩ ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಕೋವಿಡ್-೧೯ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೨೨,೩೪,೩೩೦ಕ್ಕೇರಿಕೆಯಾಗಿದೆ.

ಮುಂಬೈನಲ್ಲಿ ಅತ್ಯಧಿಕ ೩,೨೬೨ ಸೋಂಕು ಪ್ರಕರಣ ಪತ್ತೆ
ಇನ್ನು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ನಗರಗಳ ಪಟ್ಟಿಯಲ್ಲಿ ವಾಣಿಜ್ಯ ರಾಜಧಾನಿ ಮುಂಬೈ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ ಇಂದು ಕೂಡ ೩,೨೬೨ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಮುಂಬೈನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೩,೬೫,೯೩೭ಕ್ಕೆ ಏರಿಕೆಯಾಗಿದ್ದು, ೧೧,೫೯೬ ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಬಿಎಂಸಿ ಮಾಹಿತಿ ನೀಡಿದೆ.