ಕೋವಿಡ್ ೧೯ ಗುಣಮುಖರಾದವರಿಂದ ವಿಶ್ವ ಪರಿಸರ ದಿನಾಚರಣೆ


ರಾಯಚೂರಿನ.ಜೂ.೦೬-ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ವಿನೂತನವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಐ.ಡಿ.ಎಸ್.ಎಮ್.ಟಿ ಬಡಾವಣೆಯ ಉದ್ಯಾನವನದಲ್ಲಿ ಕೋವಿಡ್ ೧೯ ಕಾಯಿಲೆಯಿಂದ ಗುಣಮುಖರಾದವರಿಂದ ಗಿಡಗಳನ್ನು ನೆಡೆಸುವುದರ ಮೂಲಕ ವಿನೂತನವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಬಡಾವಣೆಯ ಹಿರಿಯರಾದ ಶ್ರೀನಿವಾಸ ಬಡಿಗಾರ ಇವರ ಸಮ್ಮುಖದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಕೋವಿಡ್ – ೧೯ ರಿಂದ ಗುಣಮುಖರಾದ ರವಿಕುಮಾರ ನಾಗೋಲಿ ಹಾಗೂ ಕೋವಿಡ್ ಕೇರ್ ಸೆಂಟರ್‌ನಿಂದ ಗುಣಮುಖರಾಗಿ ಬಂದ ನಗರದ ಪಾಲೀಟೆಕ್ನಿಕ್ ಕಾಲೇಜಿನಲ್ಲಿ ಮೆಕಾನಿಕಲ್ ವಿಭಾಗದ ಸಿಬ್ಬಂದಿಯಾದ ಶಶಿಕಾಂತ ಇವರು ಆಲದ ಮರದ ಗಿಡ, ಬೇವಿನ ಮರದ ಗಿಡ ಹಾಗೂ ಬಾದಾಮಿ ಮರದ ಗಿಡಗಳನ್ನು ನೆಟ್ಟು ಸಂತಸವನ್ನು ವ್ಯಕ್ತಪಡಿಸಿದರು. ಕೋವಿಡ್ ೧೯ ಒಂದು ಸಾದಾರಣ ಸಾಂಕ್ರಾಮಿಕ ರೋಗ ತರಹದ ಒಂದು ಕಾಯಿಲೆ, ಧೈರ್ಯದಿಂದ, ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಜಾಗೂರಕರಾಗಿ ಇದ್ದರೆ ಈ ಕಾಯಿಲೆಯನ್ನು ಗೆಲ್ಲಬಹುದು ಎಂಬ ಸಂದೇಶವನ್ನು ಸಾರುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು.
ನಂತರ ಇಗಾಗಲೇ ಉದ್ಯಾನವನದಲ್ಲಿ ಬೆಳೆದು ನಿಂತ ಗಿಡಗಳ ಸುತ್ತ ಬೆಳೆದ ಕಳೆಯನ್ನು ತೆಗೆದು ಗಿಡಗಳಿಗೆ ನೀರಿನ ಕುಣಿಗಳನ್ನು ಮಾಡಿ ಶ್ರಮಾದಾನವನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್.ವಿ.ಡಿ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಆಂಜನೇಯ ಓಬಳೇಶ, ಬಡಾವಣೆಯ ಶಿವಕುಮಾರ್ ಶಿರಾನಿ, ಪ್ರಶಾಂತ, ರಮೇಶ, ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕರಾದ ಇಮ್ಯಾನೂವೇಲ್ ರಾಜ್, ಅಜಯ್ ಸಿಂಘ್, ಗಂಗಾಧರ, ನಾಗರಾಜ, ಇಸ್ಮೇಲ್, ಅಕ್ಷಯ್ ಹಾಗೂ ಉದ್ಯಾನವನದ ಕೆಲಸಗಾರರಾದ ಗಂಗಾಧರ ಇವರು ನೆಟ್ಟಿರುವ ಗಿಡಗಳಿಗೆ ಅತೀ ಉತ್ಸಾಹದಿಂದ ಶ್ರಮಾದಾನ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.