ಕೋವಿಡ್-೧೯ ಎರಡನೇ ಅಲೆ ಹರಡದಂತೆ ಕ್ರಮವಹಿಸಿ- ಎಡಿಸಿ

ರಾಯಚೂರು,ಏ.೦೨- ಕೋವಿಡ್-೧೯ ಸೋಂಕು ತಡೆಗಟ್ಟುವಲ್ಲಿ ಈ ಹಿಂದೆ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಸಾಧಿಸಿತ್ತು, ಇದೀಗ ಅದರ ಎರಡನೇ ಅಲೆ ಹರಡದಂತೆ ಅಗತ್ಯವಿರುವ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಅವರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಯವರ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಮಾತನಾಡಿದರು.
ಕೋವಿಡ್-೧೯ ಸೋಂಕಿನ ಎರಡನೇ ಅಲೆ ಜಿಲ್ಲೆಯಲ್ಲಿ ಹರಡದಂತೆ ಕ್ರಮವಹಿಸಬೇಕಿದೆ ಹಾಗೂ ಮಸ್ಕಿ ಉಪ ಚುನಾವಣೆಯ ಮತದಾನದಲ್ಲೂ ಇದರ ಸೋಂಕು Pಣದಂತೆ ಕ್ರಮವಹಿಸಲು ೮೦ ವರ್ಷ ದಾಟಿದವರು ಹಾಗೂ ವಿಕಲಚೇತನ ವ್ಮತದಾರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ, ಮುಖ್ಯವಾಗಿ ಮಾಸ್ಕ್ ಧರಿಸದವರಿಗೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಂಡ ವಿಧಿಸಬೇಕು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಈ ಬಗ್ಗೆ ಸೂಚನೆ ನೀಡಿರುತ್ತಾರೆ, ಕೊರೋನಾ ನಿಯಂತ್ರಿಸುವಲ್ಲಿ ಮಾಸ್ಕ್ ಧಾರಣೆ ಅತಿ ಮುಖ್ಯ, ಅದನ್ನು ಧರಿಸದೇ ಓಡಾಡುವವರನ್ನು ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯತ್, ಪುರಸಭೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಮೂಲಕ ದಂಡ ವಿಧಿಸಬೇಕು ಎಂದರು.
ಕೋವಿಡ್-೧೯ನ ಎರಡನೇ ಅಲೆ ಗಂಭೀರವಾಗಿದ್ದು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ವ್ಯಾಪಕವಾಗಿದೆ, ಅಲ್ಲಿಂದ ಜಿಲ್ಲೆಗೆ ಬರುವವರಿಗೆ ಈ ವೈರಸ್ ಹರಡಿರುವ ಸಾಧ್ಯತೆಗಳಿರುತ್ತವೆ, ಆದ ಕಾರಣ ಇವರಿಗೆ ಕಡ್ಡಾಯವಾಗಿ ಕೋವಿಡ್ ತಪಾಸಣೆ ನಡೆಸಬೇಕು, ಮುಖ್ಯವಾಗಿ ಕೋವಿಡ್ ಲಸಿಕೆ ಪಡೆಯಲು ಹೆಚ್ಚಿನ ಜಾಗೃತಿ ಮೂಡಿಸಬೇಕು, ಫ್ರಂಟ್‌ಲೈನ್ ಕಾರ್ಯಕರ್ತರು, ಸರ್ಕಾರಿ ನೌಕರರು, ಅವರ ಕುಟುಂಬದವರು ಸೇರಿದಂತೆ ಪ್ರೋಟೋಕಾಲ್ ಪ್ರಕಾರ ಎಲ್ಲರೂ ಲಸಿಕೆ ಪಡೆಯಬೇಕು, ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು, ಆರೋಗ್ಯ ಇಲಾಖೆಯವರು ಲಸಿಕೆ ಪಡೆಯದವರ ಪಟ್ಟಿ ತಯಾರಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು, ಆರ್.ಸಿ ಎಚ್ ಅಧಿಕಾರಿ ಡಾ. ವಿಜಯಾ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ತಹಶೀಲ್ದಾರ್ ಡಾ ಹಂಪಣ್ಣ ಸೇರಿದಂತೆ ವಿವಿಧ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.