ಕೋವಿಡ್ ಹೊಸ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ : ಜಿಲ್ಲಾಧಿಕಾರಿ

ಧಾರವಾಡ, ಎ 4: ಕೋವಿಡ್-19 ಸೋಂಕಿನ 2ನೇ ಅಲೆಯ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಡಿಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದ್ದು, ಧಾರವಾಡ ಜಿಲ್ಲೆಯಲ್ಲಿ ಮಾರ್ಗಸೂಚಿಗಳ ಪಾಲನೆಗಾಗಿ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆ, ನಿಯಮ ಉಲ್ಲಂಘಿಸುವ ವ್ಯಕ್ತಿ, ಸಂಸ್ಥೆ ಹಾಗೂ ಇತರ ಅಂಗಡಿ, ಸ್ಟೋರ್‍ಗಳ ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ದಂಡ ವಿಧಿಸಿ, ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಜಿಲ್ಲಾ ಆರೋಗ್ಯ ಪಡೆ ಹಾಗೂ ವಿವಿಧ ತಂಡಗಳ ನೋಡಲ್ ಅಧಿಕಾರಿಗಳ ಮತ್ತು ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆ ಜರುಗಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. . ಸರ್ಕಾರ ನೀಡಿರುವಎಂದು ಹೇಳಿ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆ ಮತ್ತು ತಂಡಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ ದರು
ಸರ್ಕಾರಿ ಆದೇಶದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ವಿದ್ಯಾಗಮ ಯೋಜನೆಯಡಿ ಪಾಠ ಹಾಗೂ 6 ರಿಂದ 9 ನೇ ತರಗತಿಯ ವರ್ಗಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿ ರಜೆಯನ್ನು ಘೋಷಿಸಲಾಗಿದೆ.
ವಿವಿಧ ಇಲಾಖೆಗಳಡಿಯಲ್ಲಿ ಬರುವ 6 ರಿಂದ 9 ನೇ ತರಗತಿವರೆಗಿನ ವಸತಿ ಶಾಲೆಗಳು ಹಾಗೂ ಹಾಸ್ಟೇಲ್‍ಗಳಿಗೆ ಏ.20 ರ ವರೆಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯ ಧಾರ್ಮಿಕ ಕೇಂದ್ರ ಹಾಗೂ ಸ್ಥಳಗಳಲ್ಲಿ ಗುಂಪು ಸೇರಬಹುದಾದ ಪ್ರವಚನ, ವಿಶೇಷ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ನೀಡಲಾಗುವುದಿಲ್ಲ. ಈ ಕುರಿತು ತಹಶೀಲ್ದಾರ್ ಹಾಗೂ ಅಪರ ಜಿಲ್ಲಾಧಿಕಾರಿ ಮೇಲುಸ್ತುವಾರಿ ವಹಿಸಿ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಜಾತ್ರಾ ಮಹೋತ್ಸವಗಳು, ಮೇಳಗಳು ಮತ್ತು ಗುಂಪು ಸೇರುವುದರ ನಿಷೇಧವನ್ನು ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.
ಸರ್ಕಾರ ಅಪಾರ್ಟ್‍ಮೆಂಟ್‍ಗಳಲ್ಲಿರುವ ಜಿಮ್, ಸ್ವಿಮ್ಮಿಂಗ್‍ಪೂಲ್, ಕ್ಲಬ್‍ಹೌಸ್, ಇಂಡೋರ್ ಸ್ಟೇಡಿಯಂ ಮುಂತಾದವುಗಳನ್ನು ಸಂಪೂರ್ಣ ಬಂದ್ ಮಾಡಲು ಆದೇಶಿಸಿದೆ. ಈ ಕುರಿತು ಮಹಾನಗರ ಪಾಲಿಕೆ ಪರಿಶೀಲಿಸಿ ಕ್ರಮ ವಹಿಸಬೇಕೆಂದು ಅವರು ಹೇಳಿದರು.
ರ್ಯಾಲಿ, ಮುಷ್ಕರ, ಧರಣಿಗೆ ಅನುಮತಿ ಇಲ್ಲ, ಸಾರಿಗೆ ವಾಹನಗಳಲ್ಲಿ ನಿರ್ಧಿಷ್ಟಪಡಿಸಿದ ಪ್ರಯಾಣಿಕರಿಗೆ ಮಾತ್ರ ಅವಕಾಶ, ಧಾರವಾಡ ಜಿಲ್ಲೆಯಲ್ಲಿ ಪಬ್, ಬಾರ್, ಕ್ಲಬ್, ರೆಸ್ಟೊರೆಂಟ್‍ಗಳಲ್ಲಿ ಗರಿಷ್ಟ ಗ್ರಾಹಕರ ಸಂಖ್ಯೆಯ ಶೇ.50 ರಷ್ಟು ಮೀರುವಂತಿಲ್ಲ, ಶಾಪಿಂಗ್ ಮಾಲ್‍ಗಳು, ಮುಚ್ಚಿದ ಪ್ರದೇಶಗಳಲ್ಲಿರುವ ಮಾರ್ಕೆಟ್‍ಗಳು ಹಾಗೂ ಡಿಪಾರ್ಟ್‍ಮೆಂಟಲ್ ಸ್ಟೋರ್‍ಗಳಲ್ಲಿ ಶಿಷ್ಠಾಚಾರದನ್ವಯ ಕೋವಿಡ್ ಮುನ್ನೆಚ್ಚರಿಕೆಗಾಗಿ ಮಾಸ್ಕ್ ಧಾರಣೆ, ದೈಹಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರಬೇಕು.
ಮಾರ್ಗಸೂಚಿಯಲ್ಲಿ ತಿಳಿಸಿದ ನಿಯಮಗಳನ್ನು ಯಾವುದೇ ವ್ಯಕ್ತಿ, ವ್ಯಕ್ತಿಗಳ ಗುಂಪು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2020 ರ 4, 5 ಮತ್ತು 10 ರಲ್ಲಿನ ವಿಭಾಗದಂತೆ ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು. ಮಾರ್ಗಸೂಚಿಯಲ್ಲಿನ ನಿಯಮಗಳು ಏಪ್ರಿಲ್ 20, 2021 ರ ವರೆಗೆ ಚಾಲ್ತಿಯಲ್ಲಿರುತ್ತವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಲಾಬೂರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಮಹಾನಗರ ಪಾಲಿಕೆಯ ಆಯುಕ್ತ ಡಾ.ಸುರೇಶ್ ಇಟ್ನಾಳ ಉಪಸ್ಥಿತರಿದ್ದರು.