ಕೋವಿಡ್ ಹೆಚ್ಚಿರುವ ಪ್ರದೇಶವನ್ನು ಮೈಕ್ರೋ ಕಂಟೈನಮೆಂಟ್ ಝೋನ್ ಎಂದು ಘೋಷಿಸಿ ಕ್ರಮ

ಬೀದರ:ಎ.22: ಕೋವಿಡ್-19 ಪಾಜೀಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಗುರುತಿಸಿ ಅದನ್ನು ಮೈಕ್ರೋ ಕಂಟೈನಮೆಂಟ್ ಝೋನ್ ಎಂದು ಘೋಷಿಸಿ, ಅಗತ್ಯ ಮುಂಜಾಗ್ರೆತೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಏಪ್ರಿಲ್ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಬೀದರನ ಶಿವನಗರ (ಉತ್ತರ), ನ್ಯೂ ಆದರ್ಶ ಕಾಲೋನಿ, ಅಲ್ಲಮಪ್ರಭು ನಗರ, ಬಸವ ನಗರ ಹಾಗೂ ಇನ್ನೀತರ ಎರಡು ಪ್ರದೇಶಗಳು ಸೇರಿದಂತೆ ಒಟ್ಟು ಆರು ಪ್ರದೇಶಗಳನ್ನು ಈಗಾಗಲೇ ಮೈಕ್ರೋ ಕಂಟೈನಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಸಿಸಿಸಿ ಸೆಂಟರ್ ಹೆಚ್ಚಿಸಿ: ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರಗಳ ಸಂಖ್ಯೆಗಳನ್ನು ಇನ್ನಷ್ಟು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ತಾಲೂಕುಗಳಲ್ಲಿ ಕಡ್ಡಾಯ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು ಎಂದು
ಜಿಲ್ಲಾಧಿಕಾರಿಗಳು ಸೂಚಿಸಿದರು.
ಎಲ್ಲರೂ ಜಾಗೃತರಾಗೋಣ: ಈಗಿನಿಂದಲೇ ನಾವು ಜಾಗೃತರಾಗದಿದ್ದರೆ ಮುಂದಿನ 45 ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಪರಿಸ್ಥಿತಿಯು ಗಂಭೀರ ಸ್ವರೂಪ ಪಡೆಯಲಿದೆ. ಇದಕ್ಕೆ ನಾವು ಯಾರು ಕೂಡ ಅವಕಾಶಕೊಡಬಾರದು. ಮೇ 15ರವರೆಗೆ ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಲು ಮೊದಲಾದ್ಯತೆ ನೀಡಬೇಕು. ಕಚೇರಿಗಳಲ್ಲಿ ಅತೀ ಮಹತ್ವದ ಕೆಲಸಗಳಿಗೆ ಮಾತ್ರ ಎರಡನೇ ಆದ್ಯತೆ ನೀಡಿ ಅದನ್ನು ನಿರ್ವಹಣೆ ಮಾಡಬೇಕು ಎಂದು ಸಲಹೆ ಮಾಡಿದರು.
ಟೀಂ ವರ್ಕ್ ಮಾಡಿ: ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ, ಮತ್ತು ಇನ್ನೀತರ ಕಡೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಇನ್ನಿತರ ಸಿಬ್ಬಂದಿ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರಿಗೂ ಕೆಲಸವನ್ನು ಸಮರ್ಪಕವಾಗಿ ಹಂಚಿಕೆ ಮಾಡಿ ಅದರ ಪರಿಶೀಲನೆ ನಡೆಸಿದಲ್ಲಿ ಎಲ್ಲ ಕೆಲಸಗಳು ಸುಗಮವಾಗಿ ನಡೆಯಲು ಸಾಧ್ಯ ಎಂದು ತಿಳಿಸಿದರು.
ದೂರು ಬರಬಾರದು: ಕೋವಿಡ್ ಆಸ್ಪತ್ರೆಗಳಲ್ಲಿ ಸಮರ್ಪಕ ರೀತಿಯಲ್ಲಿ ಬೆಡ್ ವ್ಯವಸ್ಥೆ ಇಲ್ಲ ಎಂದು ಯಾರು ಕೂಡ ದೂರಬಾರದು. ಬ್ರಿಮ್ಸ್ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಲಭ್ಯತೆ ಇದೆ, ಆಕ್ಸಿಜನ್ ಇದೆ, ರೆಮ್‍ಸೆಡವೀರ್ ಇಂಜೆಕ್ಷನ್ ಇದೆ ಎನ್ನುವ ಮಾಹಿತಿ ಸಾರ್ವಜನಿಕರಿಗೆ ಹೋಗುವ ರೀತಿ ನಾವೆಲ್ಲರೂ ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು.
ಸಭೆಯಲ್ಲಿ ಜಿಪಂ ಸಿಇಓ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಡಿಎಚ್‍ಓ ಡಾ.ವಿ.ಜಿ.ರೆಡ್ಡಿ ಹಾಗೂ ಇನ್ನೀತರರು ಇದ್ದರು.