ಕೋವಿಡ್ ಹಿನ್ನೆಲೆ ಸರ್ಕಾರದ ಮಾರ್ಗಸೂಚಿ ಪಾಲಿಸಿಃ ಜಿಲ್ಲಾಧಿಕಾರಿ ಪಿ .ಸುನಿಲ್‍ಕುಮಾರ್

ವಿಜಯಪುರ, ಮೇ.27-ಕೋವಿಡ್ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಸಂತೆ /ಜಾತ್ರೆ ಇನ್ನಿತರ ಸಭೆ-ಸಮಾರಂಭಗಳ ನಿಷೇಧವಿದ್ದು, ಸರ್ಕಾರದ ಮಾರ್ಗಸೂಚಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಪಿ .ಸುನಿಲ್‍ಕುಮಾರ್ ಅವರು ತಿಳಿಸಿದರು.
ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀಹನುಮಾನ್ ದೇವಸ್ಥಾನದಲ್ಲಿ ಇಂದು ಕೋವಿಡ್-19 ನಿಯಂತ್ರಣ ಹಾಗೂ ಜಾಗೃತಿಯ ಬಗ್ಗೆ ಕಾರ್ಯಪಡೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಮೊದಲು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದ್ದವು. ಆದರೆ ಈಗ ಹಳ್ಳಿಗಳಲ್ಲಿ ಹೆಚ್ಚಾಗಿ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು ,ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಹಳ್ಳಿಗಳು ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಕಾರಣ ಪಂಚಾಯಿತಿ ಕಾರ್ಯಪಡೆಗಳು ಕೋರೊನ ಸೇನಾನಿಗಳು, ಪರಿಸ್ಥಿತಿಗೆ ಅನುಗುಣವಾಗಿ ನಿಯಂತ್ರಿಸಲು ಹೆಚ್ಚು ಶ್ರಮ ವಹಿಸಬೇಕು ಎಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಮನೆಮನೆಗೆ ತೆರಳಿ ಕೋವಿಡ್-19 ಸಮೀಕ್ಷೆ ಮಾಡುತ್ತಿದ್ದು, ಅವರಿಗೆ ಸಹಕಾರ ನೀಡಲು ಹಾಗೂ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಲು ಸಭೆ ಮೂಲಕ ಸಾರ್ವಜನಿಕರನ್ನು ಅವರ ಕೋರಿದ್ದಾರೆ.
45 ವಯಸ್ಸಿನ ಮೇಲ್ಪಟ್ಟವರು ಕೂಡಲೇ ಕೋವಿಡ್-19 ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಕೊಳ್ಳಲು ತಿಳಿಸಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮಗಳಲ್ಲಿ ನಡೆಯುವ ಸಂತೆ ಜಾತ್ರೆ ಇನ್ನಿತರೆ ಸಭೆ-ಸಮಾರಂಭಗಳನ್ನು ನಿಷೇಧಿಸಿದ್ದು, ಗ್ರಾಮಸ್ಥರು ಅದರಲ್ಲಿ ಪಾಲ್ಗೊಳ್ಳುವುದು ಆಗಲಿ ಅಥವಾ ಸಹಕಾರ ನೀಡುವುದಾಗಲಿ, ಮಾಡಬಾರದು ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್-19 ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಹಾಗೂ ಸಾಮಾಜಿಕ ಅಂತರ,ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸಬೇಕು ಎಂದು ಹೇಳಿದರು.
ಕೋವಿಡ್-19 ಪಾಸಿಟಿವ್ ಬಂದ ವ್ಯಕ್ತಿಗಳು ಹೋಂ ಐಸೋಲೇಶನ್ ಮಾಡಿಕೊಳ್ಳಲು ತಿಳಿಸುತ್ತಾ ಸೂಕ್ತ ಚಿಕಿತ್ಸೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಡೆದು, ನೀಡುವ ಸಲಹೆ ಸೂಚನೆಗಳನ್ನು ಪಾಲಿಸಲು ಹಾಗೂ ಔಷಧಿ ಉಪಚಾರವನ್ನು ತಪ್ಪದೇ ಪಡೆಯಬೇಕು ಹಾಗೂ ಸಂಖ್ಯೆ ಪ್ರಮಾಣವು ಹೆಚ್ಚಾದಲ್ಲಿ ಕೂಡಲೇ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಲು ತಿಳಿಸಿದರು.
ಗ್ರಾಮಸ್ಥರು ವಿನಾಕಾರಣ ಮನೆಯಿಂದ ಹೊರಗೆ ಬರುವುದಾಗಲಿ ಅಥವಾ ಗುಂಪು ಕೂಡುವುದಾಗಲಿ ನಿಷೇಧವಿದ್ದು,ಮನೆಯಿಂದ ಹೊರಗೆ ಬರದಂತೆ ಸೂಚಿಸಿದರು. ಕೋವಿಡ್ ವಾರಿಯರ್ಸ್ ಆದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಮಟ್ಟದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಸದರಿ ರೋಗವು ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ರಾಹುಲ ಶಿಂಧೆ, ದೇವರಹಿಪ್ಪರಗಿ ತಹಸಿಲ್ದಾರರು ಸಂಜುಕುಮಾರ ದಾಸರ, ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್‍ಕುಮಾರ್ ಮದ್ದಿನ.ಹಾಗೂ ಕೋರವಾರ ಗ್ರಾಮದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.