ಕೋವಿಡ್ ಹಿನ್ನೆಲೆ: ವಿವಿಧ ಕಾರ್ಯಚಟುವಟಿಕೆ ನಿಭರ್ಧ

ಚಾಮರಾಜನಗರ, ಏ.22- ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಠಿಯಿಂದ ಕೊರೊನಾ ವೈರಸ್‍ನ ಎರಡನೇ ಅಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್-19 ರೆಗ್ಯುಲೇಷನ್ಸ್ 2020 ಸೆಕ್ಷನ್ 12(3) ಹಾಗೂ ಕಲಂ 144 ಹಾಗೂ 144 (3) ರಿತ್ಯ ವಿವಿಧ ಕಾರ್ಯ ಚಟುವಟಿಕೆಗಳನ್ನು ಏಪ್ರಿಲ್ 21ರ ರಾತ್ರಿ 9 ಗಂಟೆಯಿಂದ ಮೇ 4ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಏಪ್ರಿಲ್ 21 ರಿಂದ ಮೇ 4ರ ವರೆಗೆ ಪ್ರತೀ ದಿನ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಫ್ರ್ಯೂ ಹಾಗೂ ಏಪ್ರಿಲ್ 23ರ ಶುಕ್ರವಾರ ರಾತ್ರಿ 9 ಗಂಟೆಯಿಂದ ಏಪ್ರಿಲ್ 26ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಮತ್ತು ಏಪ್ರಿಲ್ 30ರ ಶುಕ್ರವಾರ ರಾತ್ರಿ 9 ಗಂಟೆಯಿಂದ ಮೇ 3ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿರುತ್ತದೆ.
ಶಾಲಾ ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಸಂಸ್ಥೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಬರ್ಂಧಿಸಲಾಗಿದೆ. ಆನ್‍ಲೈನ್ ತರಗತಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಜಿಮ್, ಯೋಗಾ ಸೆಂಟರ್, ಸ್ವಿಮ್ಮಿಂಗ್ ಪೂಲ್, ಮನರಂಜನೆ, ಅಮ್ಯೂಸ್‍ಮೆಂಟ್ ಪಾರ್ಕ್, ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಸ್ಪಾ, ಬಾರ್, ಆಡಿಟೋರಿಯಂ, ನಾಟಕ ಪ್ರದರ್ಶನ, ಅಸೆಂಬ್ಲಿಹಾಲ್, ಸೆಮಿನಾರ್‍ಹಾಲ್‍ಅನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾದಿಂದ ಅನುಮತಿ ಪಡೆದ ಸ್ವಿಮ್ಮಿಂಗ್ ಪೂಲ್ ಅನ್ನು ಕ್ರೀಡಾ ಪಟುಗಳು ತರಬೇತಿ ಪಡೆಯಲು ಮಾತ್ರ ಅನುಮತಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್, ಕ್ಯಾಟರೀಸ್, ವೈನ್‍ಸ್ಟೋರ್, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅನುಮತಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ಕಾರ್ಯನಿರ್ವಹಿಸಲು ಅನುಮತಿಸಿದೆ. ಕೈಗಾರಿಕೆ ಮತ್ತು ಕೈಗಾರಿಕೆ ಸಿಬ್ಬಂದಿಯವರು ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ಕಾರ್ಯನಿರ್ವಹಿಸಲು ಅನುಮತಿಸಿದೆ. ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಗುರುತಿನ ಚೀಟಿ ನೀಡಬೇಕಿದೆ.
ವಾಣಿಜ್ಯ, ಆಹಾರ ಸಂಬಂಧಿ ಅಂಗಡಿಗಳು, ದಿನಸಿ ಅಂಗಡಿಗಳು, ಹಣ್ಣು, ತರಕಾರಿ, ಮೀನು, ಮಾಂಸ ಅಂಗಡಿ, ಡೇರಿ, ಮಿಲ್ಕ್ ಬೂತ್ ಮತ್ತು ಪ್ರಾಣಿಗಳ ಮೇವು ಸರಬರಾಜು ಅಂಗಡಿಗಳನ್ನು ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ತೆರೆಯಲು ಅನುಮತಿಸಿದೆ. ಹಣ್ಣು, ತರಕಾರಿ, ಹೂ ಮಾರುಕಟ್ಟೆಯನ್ನು ತೆರೆದ ಪ್ರದೇಶ, ಆಟದ ಮೈದಾನಗಳಿಗೆ ಏಪ್ರಿಲ್ 23 ರೊಳಗೆ ಸ್ಥಳಾಂತರಿಸಲು ಹಾಗೂ ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ನಡೆಸಲು ಅನುಮತಿಸಿದೆ. ಲಾಡ್ಜ್‍ಗಳಲ್ಲಿ ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ಅತಿಥಿಗಳಿಗೆ ಮಾತ್ರ ಅವಕಾಶ ನೀಡಬೇಕಿದೆ.
ಆಹಾರ ತಯಾರಿಕಾ ಘಟಕಗಳು, ಪೂರಕ ಕೈಗಾರಿಕಾ ಚಟುವಟಿಕೆಗಳು, ಬ್ಯಾಂಕ್, ಇನ್ಸೂರೆನ್ಸ್ ಸಂಸ್ಥೆ, ಎ.ಟಿ.ಎಂ, ಮುದ್ರಣ ಮತ್ತು ಮಾಧ್ಯಮ, ಖಾಸಗಿ ಭದ್ರತಾ ಸಂಸ್ಥೆಗಳು, ಉಗ್ರಾಣ ಮತ್ತು ಶೀತಲ ಘಟಕಗಳು, ಪೆಟ್ರೋಲ್, ಡೀಸಲ್ ಗ್ಯಾಸ್ ಸ್ಟೇಷನ್ಸ್ ಗಳನ್ನು ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ತೆರೆಯಲು ಅನುಮತಿಸಿದೆ.
ಇ ಕಾಮರ್ಸ್ ವೇದಿಕೆಯಲ್ಲಿ ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ಡೆಲಿವರಿ ಮಾಡಲು ಅನುಮತಿಸಿದೆ. ಕ್ಷೌರಿಕ ಅಂಗಡಿ, ಸಲೂನ್, ಬ್ಯೂಟಿ ಪಾರ್ಲರ್‍ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಅನುಸರಿಸಿ ತೆರೆಯಲು ಅನುಮತಿಸಿದೆ.
ಕಂಟೈನ್‍ಮೆಂಟ್ ಜೋನ್ ಹೊರತುಪಡಿಸಿ ಸರ್ಕಾರಿ, ಖಾಸಗಿ ಕಚೇರಿ, ಸಂಘ ಸಂಸ್ಥೆಗಳ ಕಾರ್ಯನಿರ್ವಹಣಾ ಸಂಬಂಧ ಆದೇಶ ಹೊರಡಿಸಿದ್ದು ಈ ಪ್ರಕಾರ ಖಾಸಗಿ ಸಂಸ್ಥೆ, ಐಟಿ ಸಂಸ್ಥೆಗಳು ಕಡಿಮೆ ಅಥವಾ ಅಗತ್ಯ ಸಿಬ್ಬಂದಿ ಹೊರತುಪಡಿಸಿ ಬೇರೆಲ್ಲಾ ಸಿಬ್ಬಂದಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅನುಮತಿಸಿದೆ.
ಭಾರತ ಸರ್ಕಾರದ ಕಚೇರಿ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕ ಸಂಸ್ಥೆಗಳು, ತುರ್ತು ಸೇವೆ ನಿರ್ವಹಣೆಯವರು ಕೋವಿಡ್-19ರ ಮಾರ್ಗಸೂಚಿ ಅನುಸರಿಸಿ ಸಂಬಂಧ ಪಟ್ಟ ಇಲಾಖೆಗಳು ನೀಡುವ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಅನುಮತಿಸಿದೆ.
ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿ ಕೃಷಿ ಮತ್ತು ಪೂರಕ ಚಟುವಟಿಕೆ ನಡೆಸಲು ಅನುಮತಿಸಲಾಗಿದೆ. ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿ ಆರೋಗ್ಯ ಸೇವೆಗಳನ್ನು ನೀಡಲು ಅನುಮತಿಸಿದೆ. ಮದುವೆ ಸಮಾರಂಭದಲ್ಲಿ ಕೇವಲ 50 ಜನರು ಭಾಗವಹಿಸಲು ಅನುಮತಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ 20 ಜನರು ಮಾತ್ರ ಭಾಗವಹಿಸಲು ಅನುಮತಿಸಲಾಗಿದೆ.