ಕೋವಿಡ್ ಹಿನ್ನೆಲೆ ಕೂಡ್ಲಿಗಿ ಶ್ರೀ ಕೊತ್ತಲಾಂಜನೇಯ ರಥೋತ್ಸವ ರದ್ದು

ಕೂಡ್ಲಿಗಿ.ಏ.18:- ಕೋವಿಡ್ ಮಹಾಮಾರಿ ಕಳೆದವರ್ಷದಿಂದ ಇಡೀ ವಿಶ್ವದ ಜನಜೀವನವನ್ನೇ ತಲ್ಲಣಗೊಳಿಸಿ ಧಾರ್ಮಿಕ ಕಾರ್ಯಕ್ರಮ ಸಹ ನಡೆಸಲು ಆಗದೆ ಈ ವರ್ಷವೂ ಸಹ ಎರಡನೇ ಕೋವಿಡ್ ಅಲೆ ಜೋರಾಗಿದ್ದರ ಹಿನ್ನೆಲೆಯಲ್ಲಿ ನಡೆಯಬೇಕಾಗಿದ್ದ ಜಾತ್ರಾಕಾರ್ಯದ ಮುಖ್ಯವಾದ ರಥೋತ್ಸವವು ನಡೆಸದಂತೆ ಸರ್ಕಾರವು ಆದೇಶ ಹೊರಡಿಸಿದ್ದು ಈ ನಿಯಮವನ್ನು ಪಾಲಿಸುವಂತೆ ಕೂಡ್ಲಿಗಿ ಡಿವೈಎಸ್ ಪಿ ಹರೀಶ ದೇವಸ್ಥಾನ ಸಮಿತಿ ಪದಾಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಮಹಾತ್ಮಾ ಗಾಂಧೀಜಿ ಪವಿತ್ರ ಹುತಾತ್ಮರ ಸ್ಮಾರಕ ಆವರಣದಲ್ಲಿ ಇಂದು ಬೆಳಿಗ್ಗೆ ಪಟ್ಟಣದ ಶ್ರೀ ಕೊತ್ತಲಾಂಜನೇಯ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಸಭೆ ಕರೆದು ಸರ್ಕಾರಿ ಆದೇಶದಂತೆ ರಥೋತ್ಸವ ರದ್ದುಪಡಿಸಬೇಕೆಂಬ ಆದೇಶವಿದ್ದು ಈ ನಿಯಮ ಪಾಲಿಸಿದಲ್ಲಿ ಮಹಾಮಾರಿ ಕೋವಿಡ್ ನಿಯಂತ್ರಣ ಮಾಡಬಹುದಾಗಿದ್ದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ನಿಯಮ ಪಾಲಿಸಬೇಕಾಗಿದೆ ದೇವಸ್ಥಾನಕ್ಕೆ ಹೋಗುವ ಭಕ್ತರು ಕೋವಿಡ್ ನಿಯಮ ಪಾಲಿಸಿ ಸಾಮಾಜಿಕ ಅಂತರ ಕಾಯ್ದು ಮಾಸ್ಕ್ ಹಾಕಿಕೊಂಡು ದೇವರ ದರ್ಶನ ಪಡೆದುಕೊಳ್ಳಲು ತಿಳಿಸಿದರು ಸಾರ್ವಜನಿಕ ಭಕ್ತ ಸಮೂಹಕ್ಕೆ ಸರ್ಕಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾಗೃತಿ ಮೂಡಿಸಿ ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳಿಗೆ ಹರೀಶ ಕಿವಿ ಮಾತು ಹೇಳಿದರು.
ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಕೋವಿಡ್ ನಿಯಮ ಪಾಲಿಸದವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕೂಡ್ಲಿಗಿ ಸಿಪಿಐ ಮತ್ತು ಪಿಎಸ್ಐ ಗೆ ತಿಳಿಸಿದರು ಮಹಾಮಾರಿ ಕೋವಿಡ್ ನ ಎರಡನೇ ಅಲೆ ಕುರಿತಂತೆ ವೇಗದ ಬಗ್ಗೆ ತಿಳಿಸಿದ ಅವರು ಪ್ರತಿ ವರ್ಷ ಪ್ರಸಾದ ವ್ಯವಸ್ಥೆ ಕಲ್ಪಿಸುತಿದ್ದ ಯುವಪಡೆಗೆ ಈ ಬಾರಿ ದೇವಸ್ಥಾನಕ್ಕೆ ಬಂದೋಗುವ ಭಕ್ತರಿಗೆ ಕೋವಿಡ್ ನಿಯಮ ಪಾಲಿಸುವಂತೆ ತಿಳಿಹೇಳಿ ಅವರಿಗೆ ಮಾಸ್ಕ್ ಕೊಡುವ ಕಾರ್ಯ ಮಾಡುವುದು ಉತ್ತಮ ಕಾರ್ಯ ಎಂದು ಡಿವೈಎಸ್ ಪಿ ಹರೀಶ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಪಿಎಸ್ಐ ಮಣಿಕಂಠ, ಶ್ರೀ ಕೊತ್ತಲಾಂಜನೇಯ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಜೆಸಿಐ ಕೂಡ್ಲಿಗಿ ಗೋಲ್ಡನ್, ಮೈದಾನ ಗೆಳೆಯರ ಬಳಗ ಹಾಗೂ ಪಟ್ಟಣದ ಯುವಕರು ಉಪಸ್ಥಿತರಿದ್ದರು.