ಕೋವಿಡ್ ಹಿನ್ನೆಲೆ: ಕಲಬುರಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಕಲಬುರಗಿ.ಏ.05:ಕೋವಿಡ್-19 ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಂಬರುವ ಯುಗಾದಿ ಹಾಗೂ ಮತ್ತಿತರ ಹಬ್ಬಗಳ ಸಂದರ್ಭಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಆಚರಣೆಗಳು, ಸಾರ್ವಜನಿಕರು ಗುಂಪು ಸೇರಬಹುದಾದ ಇತರೆ ಚಟುವಟಿಕೆಗಳು ಹಾಗೂ ಸಮಾರಂಭಗಳನ್ನು ನಡೆಸದಂತೆ ಮುಂದಿನ ಆದೇಶದವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಧಾರ್ಮಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಸಾರ್ವಜನಿಕರು ಗುಂಪು-ಗುಂಪಾಗಿ ಚಲಿಸುವುದು, ಅನಾವಶ್ಯಕವಾಗಿ ಹಾಗೂ ಕಾರಣ ರಹಿತವಾಗಿ ಸಂಚರಿಸುವಂತಿಲ್ಲ. ಈ ಆದೇಶವು ಸಾರ್ವಜನಿಕರ ಅಗತ್ಯ ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.