ಕೋವಿಡ್ ಹಿನ್ನೆಲೆ: ಕರ್ಪೂರ ಸೇವಾ ಕೃತಿಕೋತ್ಸವ ರದ್ದು

ತಿಪಟೂರು, ನ. ೧೭- ತಾಲ್ಲೂಕಿನ ಹೊನ್ನವಳ್ಳಿ ಶ್ರೀ ಗುರು ಕರಿಸಿದ್ದೇಶ್ವರಸ್ವಾಮಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಬೇಕಿದ್ದ ಶ್ರೀಸ್ವಾಮಿಯವರ ಪ್ರಸಿದ್ದ ಕರ್ಪೂರ ಸೇವಾ ಕೃತಿಕೋತ್ಸವವನ್ನು ಕೋವಿಡ್-೧೯ ನಿಂದಾಗಿ ರದ್ದುಗೊಳಿಸಲಾಗಿದೆ.
ಶ್ರೀಮಠದಲ್ಲಿ ವಾಡಿಕೆಯಂತೆ ನ.೧೭ ರ ಮಂಗಳವಾರ ಕರ್ಪೂರ ಸೇವೆಯು ನಡೆಯಬೇಕಿತ್ತು. ಆದರೆ ಸರ್ಕಾರದ ನಿರ್ದೇಶನದಂತೆ ಹಾಗೂ ಶ್ರೀಮಠದ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಭಕ್ತರು ಆ ದಿವಸ ಶ್ರೀಮಠಕ್ಕೆ ಬಾರದೆ ಮನೆಯಲ್ಲಿಯೆ ಸ್ವಾಮಿಗೆ ನಮಿಸಿ ಕರ್ಪೂರ ಬೆಳಗಿ ಮನದಲ್ಲಿನ ಬೇಡಿಕೆಗಳನ್ನು ಪ್ರಾರ್ಥನೆಯ ಮುಖಾಂತರ ಸಲ್ಲಿಸಿಕೊಳ್ಳಬೇಕು ಎಂದು ಶ್ರೀಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.