ಕೋವಿಡ್ ಹಿನ್ನಲೆ: 1 ಗಂಟೆ ಮತದಾನ ಅವಧಿ ಹೆಚ್ಚಳ

ಬೀದರ:ಏ.16: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದೆ. ರಾಜಕೀಯ ಗಣ್ಯರು ಕ್ಷೇತ್ರದಿಂದ ಹೊರ ಹೋಗಿದ್ದಾರೆ. ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ತೆರೆ ಮರೆ ಕಸರತ್ತು ನಡೆಸಿದ್ದಾರೆ. ಇತ್ತ ಜಿಲ್ಲಾಡಳಿತ ಮತಗಟ್ಟೆಗಳ ಸಿದ್ಧತೆಯಲ್ಲಿ ತೊಡಗಿದ್ದು, ಕೋವಿಡ್‌ ಕಾರಣ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಿದೆ.

‘ಕ್ಷೇತ್ರದಲ್ಲಿ ಈ ಬಾರಿ ಮತದಾರರ ಸಂಖ್ಯೆ ಹೆಚ್ಚಾಗಿರುವ ಕಾರಣ 62 ಹೆಚ್ಚುವರಿ ಮತಗಟ್ಟೆಗಳನ್ನು ರಚಿಸಲಾಗಿದೆ. ಕ್ಷೇತ್ರದಲ್ಲಿ 264 ಮೂಲ ಮತಗಟ್ಟೆಗಳು ಹಾಗೂ ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 326 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದ್ದಾರೆ.

ಕ್ಷೇತ್ರದ ಒಟ್ಟು 326 ಮತಗಟ್ಟೆಗಳಲ್ಲಿ 231 ಸಾಮಾನ್ಯ ಹಾಗೂ 95 ಸೂಕ್ಷ್ಮ ಮತಗಟ್ಟೆಗಳಿವೆ.392 ಮತಗಟ್ಟೆ ಅಧಿಕಾರಿಗಳು, 392 ಸಹಾಯಕ ಮತಗಟ್ಟೆ ಅಧಿಕಾರಿಗಳು ಹಾಗೂ 392 ‘ಡಿ’ ಗ್ರೂಪ್‌ ನೌಕರರು ಸೇರಿ ಒಟ್ಟು 1,960 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 9 ವಿಡಿಯೊ ಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ. 40 ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಬಸವಕಲ್ಯಾಣದ ತೇರು ಮೈದಾನದಲ್ಲಿರುವ ಮಸ್ಟರಿಂಗ್‌ ಕೇಂದ್ರಕ್ಕೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರೆದೊಯ್ಯಲು ಬೀದರ್‌ ಹಳೆಯ ಬಸ್‌ ನಿಲ್ದಾಣದಿಂದ 44 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಎರಡು ಸಖಿ ಮತಗಟ್ಟೆ

ಬಸವಕಲ್ಯಾಣ ಕ್ಷೇತ್ರದಲ್ಲಿ ಮಹಿಳಾ ಮತದಾರರಿಗೆ ಪ್ರೋತ್ಸಾಹ ನೀಡಲು ನಗರದ ಎಪಿಎಂಸಿ ಆವರಣದ ಮತಗಟ್ಟೆ ಸಂಖ್ಯೆ 98 ಹಾಗೂ ತಾಲ್ಲೂಕಿನ ಬೇಟಬಾಲಕುಂದ ಗ್ರಾಮದ ಮತಗಟ್ಟೆ ಸಂಖ್ಯೆ 54ರಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರಸ್ತುತ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 1,24,984 ಪುರುಷರು ಹಾಗೂ 1,14,794 ಮಹಿಳೆಯರು ಸೇರಿ ಒಟ್ಟು 2,39,782 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಬಂದೋಬಸ್ತ್‌ಗೆ 742 ಸಿಬ್ಬಂದಿ

‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಎಫ್‌ನ ಒಂದು ತಂಡ, ರಾಜ್ಯ ಮೀಸಲು ಪೊಲೀಸ್ ಪಡೆಯ ಐದು ಪ್ಲಾಟೂನ್‌ಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಎಂಟು ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮತಗಟ್ಟೆಗಳ ಮೇಲ್ವಿಚಾರಣೆಗೆ 20 ಸೆಕ್ಟರ್‌ ಸಂಚಾರಿ ತಂಡಗಳ ರಚನೆ ಮಾಡಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ಐದು ಮೇಲ್ವಿಚಾರಣೆ ತಂಡಗಳು ಕಾರ್ಯನಿರ್ವಹಿಸಲಿವೆ. ಇಬ್ಬರು ಡಿವೈಎಸ್‌ಪಿ, ಐವರು ಪೊಲೀಸ್‌ ಇನ್‌ಸ್ಪೆಕ್ಟರ್, 21 ಪಿಎಸ್‌ಐ, 70 ಎಎಸ್‌ಐ, 224 ಹೆಡ್‌ ಕಾನ್‌ಸ್ಟೆಬಲ್, 378 ಕಾನ್‌ಸ್ಟೆಬಲ್ ಹಾಗೂ ಗೃಹರಕ್ಷಕ ದಳದ 42 ಸಿಬ್ಬಂದಿ ಸೇರಿ ಒಟ್ಟು 742 ಪೊಲೀಸ್‌ ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳೇ ಇಲ್ಲ!

ಚುನಾವಣಾ ನೀತಿ ಸಂಹಿತೆ ಅಧಿಕಾರಿಯನ್ನಾಗಿ ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್‌ ಅವರನ್ನು ನೇಮಕ ಮಾಡಲಾಗಿದೆ.

ಕ್ಷೇತ್ರದಲ್ಲಿ ಅನೇಕ ಕಡೆ ರಾಜಕೀಯ ಪಕ್ಷಗಳು ನೀತಿ ಸಂಹಿತೆ ಉಲ್ಲಂಘನೆ ಮಾಡಿದರೂ ಅಧಿಕಾರಿಗಳು ಪ್ರಕರಣ ದಾಖಲಿಸಿದ ಬಗ್ಗೆ ಒಂದು ಮಾಹಿತಿಯನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಬಿಜೆಪಿಯು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸಮಾವೇಶ ನಡೆಸಿದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಮೂರು ವರ್ಗದವರಿಗೆ ಅಂಚೆ ಮತ

ಬೀದರ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮೂರು ವರ್ಗದವರಿಗೆ ಅಂಚೆ ಮತ ಹಾಕಲು ಅವಕಾಶ ಕೊಡಲಾಗಿದೆ.

ಕ್ಷೇತ್ರದಲ್ಲಿ 5,815 ಜನ 80 ವರ್ಷ ಮೇಲ್ಪಟ್ಟವರು ಹಾಗೂ 2,627 ಅಂಗವಿಕಲರು ಇದ್ದಾರೆ. ಕೋವಿಡ್‌ ಸೋಂಕಿತರು ಹಾಗೂ ಶಂಕಿತರಿಗೂ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸೋಂಕಿತರನ್ನು ಗುರುತಿಸುವುದು ಜಿಲ್ಲಾಡಳಿತಕ್ಕೆ ಕಷ್ಟವಾಗುತ್ತಿದೆ.

ಐದು ದಿನಗಳ ಹಿಂದೆ ಬಿಎಲ್‌ಒಗಳು ನಗರದಲ್ಲಿ ಮಾತ್ರ ಕೆಲ ಮನೆಗಳಿಗೆ ಹೋಗಿ ಅಂಚೆ ಮತಗಳ ಅರ್ಜಿ ಕೊಟ್ಟಿದ್ದರು. ಅದರಲ್ಲಿ 786 ಹಿರಿಯ ನಾಗರಿಕರು ಹಾಗೂ 403 ಅಂಗವಿಕಲರು ಅರ್ಜಿ ಕೊಟ್ಟಿದ್ದಾರೆ. ಅವರಿಂದ ಅಂಚೆ ಮತಗಳನ್ನೂ ಪಡೆಯಲಾಗಿದೆ.

‘ಜಿಲ್ಲಾಡಳಿತ ಈ ಕುರಿತು ಮಾಧ್ಯಮಗಳ ಮೂಲಕ ಮಾಹಿತಿ ಬಿಡುಗಡೆ ಮಾಡಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಹಿರಿಯ ನಾಗರಿಕರು ಹಾಗೂ ಕೋವಿಡ್‌ ಸೋಂಕಿತರಿಗೆ ಅಂಚೆ ಮತದಾನಕ್ಕೆ ಅವಕಾಶ ಮಾಡಿರುವ ಮಾಹಿತಿಯೇ ಇಲ್ಲ’ ಎಂದು ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿ ಗ್ರಾಮದ ಮನೋಹರ ಬೇಸರ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿ ಒಂದು ಗಂಟೆ

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಹರಡದಂತೆ ಎಚ್ಚರ ವಹಿಸಲು ಮತಗಟ್ಟೆಗಳಲ್ಲಿ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕಿದೆ. ಹೀಗಾಗಿ ಮತದಾನ ಕಾರ್ಯ ಸ್ವಲ್ಪ ವಿಳಂಬವಾಗುವ ಸಾಧ್ಯತೆ. ಇದೇ ಕಾರಣಕ್ಕೆ ಮತದಾನ ಅವಧಿಯನ್ನು ಸಂಜೆ 6ರ ಬದಲಿಗೆ 7 ಗಂಟೆಯ ವರೆಗೆ ವಿಸ್ತರಿಸಲಾಗಿದೆ.

ಕೋವಿಡ್ ಸೋಂಕಿತರು ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಲು ಚುನಾವಣಾ ಆಯೋಗ ಅನುಮತಿ ಕಲ್ಪಿಸಿದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಆದರೆ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಕುರಿತು ಮಾಹಿತಿ ಹಂಚಿಕೊಂಡಿಲ್ಲ.