ಕೋವಿಡ್ ಹಾವಳಿ: ಕಲಬುರಗಿಗೆ ಬಿ. ಶರತ್ ಮರಳಿ ಕರೆಸಲು ಆಗ್ರಹ

ಕಲಬುರಗಿ :ಏ.26:ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ನಿಯಂತ್ರಿಸಲು ತಕ್ಷಣವೇ ಹಿಂದಿನ ಜಿಲ್ಲಾಧಿಕಾರಿ ಶರತ್ ಬಿ., ಅವರನ್ನು ಮರಳಿ ಕರೆಸಿ ಅವರಿಗೆ ವಿಶೇಷ ಅಧಿಕಾರಿಗಳನ್ನಾಗಿ ನೇಮಕ ಮಾಡುವುದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡಲೇ ಬದಲಿಸಬೇಕು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ್ ಭರಣಿ ಅವರು ಒತ್ತಾಯಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕಳೆದ 2019-2020ರಲ್ಲಿ ಉಂಟಾದ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಹಿಂದಿನ ಜಿಲ್ಲಾಧಿಕಾರಿ ಶರತ್ ಬಿ., ಅವರನ್ನು ಜಿಲ್ಲೆಗೆ ವಿಶೇಷ ಅಧಿಕಾರಿಗಳನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಜಿಲ್ಲೆಯೂ ಸೇರಿದಂತೆ ದೇಶಾದ್ಯಂತ ಆಕ್ಸಿಜನ್ ಸಿಲೆಂಡರ್, ರೆಮಿಡೆಸಿವರ್ ಇಂಜೆಕ್ಷನ್ ಕೊರತೆ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಈ ಕೊರತೆ ನೀಗಿಸಲು ಶರತ್ ಬಿ., ಅವರು ವಿಶೇಷಾಧಿಕಾರಿಗಳನ್ನಾಗಿ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಹಲವಾರು ತಿಂಗಳಿಂದ ಜಿಲ್ಲೆಗೆ ಅಗಮಿಸದ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರು ಉಲ್ಬಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವಾಸ್ತವ ಸ್ಥಿತಿ ಅರಿಯಲು ಕಲಬುರ್ಗಿಗೆ ಭೇಟಿ ನೀಡಬೇಕಿತ್ತು. ಆದಾಗ್ಯೂ, ಅರುಮುರುವು ಹಿಡಿದಂತಹ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು, ಅವರು ಜಿಲ್ಲೆಯನ್ನು ಹಿಂತಿರುಗಿ ನೋಡುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಲಾಗಿದೆ. ಬೆಂಗಳೂರಿನಲ್ಲಿಯೇ ಕುಳಿತು ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸುವುದು ಸೂಕ್ತವಲ್ಲ. ಆದ್ದರಿಂದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ್, ಹಾಜಪ್ಪ, ಸಿದ್ದು, ಆಕಾಶ್, ಗೌತಮ್ ಮುಂತಾದವರು ಉಪಸ್ಥಿತರಿದ್ದರು.