ಕೋವಿಡ್ ಹತೋಟಿಗೆ ಟಾಸ್ಕ್ ಫೋರ್ಸ್: ಡಾ.ಕೆ.ಸುಧಾಕರ್

ಬೆಂಗಳೂರು, ಏ.24- ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಸಮರ್ಥವಾಗಿ ಹತೋಟಿಗೆ ತರಲು ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಹಯೋಗದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿಂದು ಆರೋಗ್ಯ ತಜ್ಞರೊಂದಿಗೆ ಹಾಗೂ ಸಿಐಐ ಪ್ರತಿನಿಧಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಸಿಐಐ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ. ಈ ಸಮಿತಿಯು ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಬಲಪಡಿಸುವ ಕಾರ್ಯ ಮಾಡಲಿದೆ.

ಕೊರೋನಾ ಕುರಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಾಲ್ ಸೆಂಟರ್, ಮಾಡ್ಯೂಲರ್ ಐಸಿಯುಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಲ್ಲಿ ಟಾಸ್ಕ್ ಫೋರ್ಸ್ ಮುಂದಾಳತ್ವ ವಹಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದರು.

ಆರೋಗ್ಯ ವಲಯದಲ್ಲಿ ತಂತ್ರಜ್ಞಾನ ಬಳಕೆ, ಔಷಧಿಗಳ ಪೂರೈಕೆ, ವೈದ್ಯಕೀಯ ಸಾಧನ, ಉಪಕರಣಗಳ ಪೂರೈಕೆ, ತಂತ್ರಾಂಶ ಒದಗಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಟಾಸ್ಕ್ ಫೋರ್ಸ್ ರಾಜ್ಯ ಸರ್ಕಾರಕ್ಕೆ ನೆರವು ನೀಡಲಿದೆ ಎಂದರು.

ಸಹಾಯವಾಣಿ: ಕೋವಿಡ್ ನಿರ್ವಹಣೆ ಮಾಡಲು ಕೆಲ ಸಹಾಯವಾಣಿಗಳಿವೆ. ಆದರೆ ಇದರಿಂದಾಗಿ ಜನರಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಇದಕ್ಕಾಗಿ ಒಂದು ಬೃಹತ್ ಕಾಲ್ ಸೆಂಟರ್ ನಿರ್ಮಿಸಿ ಎಲ್ಲವನ್ನೂ ಸಮನ್ವಯಗೊಳಿಸುವ ವ್ಯವಸ್ಥೆ ತರಬೇಕಿದೆ. ಈ ಕಾರ್ಯವನ್ನು ಟಾಸ್ಕ್ ಫೋರ್ಸ್ ಗೆ ವಹಿಸಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರು ಸಹಾಯವಾಣಿ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ ಎಂದರು.

ಇನ್ನು, ಈ ಟಾಸ್ಕ್ ಫೋರ್ಸ್ ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತಾಗಿ ಸರ್ಕಾರಕ್ಕೆ ನೆರವು ನೀಡಲಿದೆ. ಕೋವಿಡ್ ರೋಗಿಗಳಿಗಾಗಿ ರಾಜ್ಯದಲ್ಲಿ 3,000-5,000 ಮಾಡ್ಯೂಲರ್ ಐಸಿಯು ಹಾಸಿಗೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೂ ಟಾಸ್ಕ್ ಫೋರ್ಸ್ ನೆರವಾಗಲಿದೆ. ಕೆಲ ಕಂಪನಿಗಳು ಕೇವಲ 7-10 ದಿನಗಳಲ್ಲಿ ಇಂತಹ ಐಸಿಯು ರೂಪಿಸುವುದಾಗಿ ತಿಳಿಸಿವೆ ಎಂದು ತಿಳಿಸಿದರು.

ಸಭೆಯಲ್ಲಿ ಸಿಐಐ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ವಿಕ್ರಮ್ ಕಿರ್ಲೋಸ್ಕರ್, ಖ್ಯಾತ ವೈದ್ಯ ಡಾ.ದೇವಿಶೆಟ್ಟಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.