ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸಿ

ಬೀದರ:ಎ.20: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೊಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಾಡ್ಲೂರ ಸತ್ಯನಾರಾಯಣಾಚಾರ್ಯ ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸೋಂಕು ದೇಶದ್ಯಾಂತ ಪುನಃ ಹೆಚ್ಚಾಗುತ್ತಿದ್ದು, ಬೀದರ ಜಿಲ್ಲೆಯು ಅದಕ್ಕೆ ಹೊರತಾಗಿಲ್ಲ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಾದ ನಾವು ನೀವು ಮುಂಜಾಗೃತಾ ಅಥವಾ ಮುನ್ನೆಚ್ಚರಿಕೆ ಕ್ರಮಗಳಾದ ಕಡ್ಡಾಯ ಮಾಸ್ಕ ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಔಷಧಿ ಲಭ್ಯವಾಗುವವರೆಗೆ ಈ ಕ್ರಮಗಳನ್ನು ಮುಂದುವರೆಸಬೇಕು ಎಂದು ಅವರು ತಿಳಿಸಿದ್ದಾರೆ.
ನಮ್ಮ ಘನ ಕೇಂದ್ರ ಸರ್ಕಾರವು ಕೋವಿಡ್-19 ಲಸಿಕಾಕರಣ ಯೋಜನೆಯನ್ನು ಆರಂಭಿಸಿದ್ದು, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಈ ಯೋಜನೆಯು ಚಾಲ್ತಿಯಲ್ಲಿರುತ್ತದೆ. ಕೋವಿಶೀಲ್ಡ್ ಕೊವಾಕ್ಸಿನ್ ಲಸಿಕೆ ಲಸಿಕೆಗಳನ್ನು ಅನುಮೋದಿಸಲಾಗಿದೆ.
ಯಾರು ಲಸಿಕೆಗಳನ್ನು ಪಡೆದುಕೊಳ್ಳಬಹುದು: 45 ವರ್ಷಗಳಿಕ್ಕಿಂತ ಮೇಲ್ಪಟ್ಪ ವಯಸ್ಸಿನ ವ್ಯಕ್ತಿಗಳು, ಧೀರ್ಘ ಕಾಲದ ಕಾಯಿಲೆಗಳು ಅಥವಾ ಹೃದಯ, ನರಮಂಡಲ, ಶ್ವಾಸಕೋಶದ ಮೂತ್ರಪಿಂಡದಂತಹ ಅಸ್ವಸ್ತತೆಗಳನ್ನು ಹೊಂದಿದ್ದವರು ಲಸಿಕೆ ಪಡೆದುಕೊಳ್ಳಬಹುದು. ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಅಸ್ತಮಾ ಅಥವಾ ಥೈರಾಯ್ಡ್ ಕಾಯಿಲೆ ಹೊಂದಿದ್ದರೆ ಲಸಿಕೆ ಪಡೆದುಕೊಳ್ಳಬಹುದು. ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದವರು ಕೂಡ ಮತ್ತು ಇಮ್ಯುನೊ ಡಿಫಿಷಿಯನ್ಸಿ, ಎಚೈವಿ, ಯಾವುದೇ ಸ್ಥಿತಿಯಿಂದಾಗಿ ರೋಗ ನಿರೋಧಕ-ನಿಗ್ರಹದ ರೋಗಿಗಳು ಕೂಡ ಲಸಿಕೆಯನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು.
ಯಾರು ಲಸಿಕೆ ಪಡೆದುಕೊಳ್ಳಬಾರದು: ಗರ್ಭಿಣಿಯರು ಮತ್ತು ಬಾಣಂತಿಯರು ಮತ್ತು 18ಕ್ಕಿಂತ ಕಡಿಮೆ ಇರುವ ವಯಸ್ಸಿನವರು ಲಸಿಕೆ ತೆಗೆದುಕೊಳ್ಳಬಾರದು.
ಎಲ್ಲಿ ಲಸಿಕೆ ಪಡೆದುಕೊಳ್ಳಬಹುದು: ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾಸ್‍ಪೋರ್ಟ್, ವಾಹನ ಚಾಲನಾ ಪರವಾನಿಗೆ ಪತ್ರದ ದಾಖಲೆಗಳೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.
ನಿರ್ಲಕ್ಷ್ಯ ಮಾಡಬೇಡಿ: ಕೋರೋನಾ ಸಾಂಕ್ರಾಮಿಕವನ್ನು ನಿರ್ಲಕ್ಷ್ಯ ಮಾಡಬೇಡಿ. ಕೋರೋನಾ ವಿರುದ್ಧದ ಹೋರಾಟದಲ್ಲಿ ನಾವು ಭಾಗಿಯಾಗಿ ಲಸಿಕೆ ಪಡೆಯಬೇಕು ಹಾಗೂ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
ಲಸಿಕೆಗಾಗಿ ನೋಂದಣಿ ವಿಧಾನ: ಕೋರೋನಾ ಲಸಿಕೆ ಪಡೆದುಕೊಂಡ ನಂತರವು ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯವಾಗಿರುತ್ತದೆ. ಕೋವಿಡ್ ಲಸಿಕೆಗಾಗಿ ಆನ್‍ಲೈನ್ ನೋಂದಣಿ ಮತ್ತು ನೇರ ವಾಕ್ ಇನ್ ನೋಂದಣಿ ಲಭ್ಯವಿರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.