ಕೋವಿಡ್ ಸೋಂಕು ನಿರ್ಮೂಲನೆ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ: ಸಚಿವ ಆರ್. ಶಂಕರ್

ಯಾದಗಿರಿ ಮೇ 16: ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೇರಿದಂತೆ ಎಲ್ಲರೂ ಶ್ರಮಿಸೋಣ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗೂ ಯದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಅವರು ಕರೆ ನೀಡಿದರು.

ಶನಿವಾರ ಸುರಪುರ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಹಾಗೂ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕೋವಿಡ್ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ಆಕ್ಸಿಜನ್ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೂಗೌಡ ಅವರು, ಆಕ್ಸಿಜನ್ ಘಟಕವು ಒಂದು ನಿಮಿಷಕ್ಕೆ 100 ಲೀಟರ್ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆರೋಗ್ಯದ ಬಗ್ಗೆ ತುರ್ತುಸ್ಥಿತಿ ಇರುವುದರಿಂದ ಅಗತ್ಯ ಸಿಬ್ಬಂದಿಯನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ಅವರು, ಹೆಚ್ಚುವರಿ ಸಂಬಳ ನೀಡಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ 33 ವೈದ್ಯರು ಹಾಗೂ 19 ಪಿಜಿಶಿಯನ್ ವೈದ್ಯರನ್ನು ತುಂಬಿಕೊಳ್ಳುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರೊಂದಿಗೆ ಚರ್ಚಿಸಿದ್ದೇನೆ. ಆದರೆ, ಎನ್‍ಡಿಆರ್‍ಎಫ್ ಅಡಿಯಲ್ಲಿ ತುಂಬಿಕೊಳ್ಳಲು ಬರುವುದಿಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಡಿ ತುಂಬಿಕೊಳ್ಳಬಹುದೆಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಕ್ರಿಯೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದ ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಕೋವಿಡ್ ಸೋಂಕಿತರನ್ನು ಸಾಂಸ್ಥಿಕ ಸಂಸ್ಥೆಗಳಲ್ಲಿ ಕ್ವಾರಾಂಟೈನ್‍ನಲ್ಲಿಡಬೇಕು. ಯಾಕೆಂದರೆ ಕೆಲ ಮನೆಗಳಲ್ಲಿ ಐದಾರು ಜನರು ವಾಸವಿದ್ದು, ಒಂದೇ ಶೌಚಾಲಯ ಬಳಸುತ್ತಾರೆ. ಕೂಡಲೇ ಇದಕ್ಕೆ ಕ್ರಮಕೈಗೊಳ್ಳಬೇಕು. ಸೋಂಕಿತರನ್ನು ಕ್ವಾರಾಂಟೈನ್‍ನಲ್ಲಿಡುವ ಸಂಬಂಧಪಟ್ಟ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಈ ಕುರಿತು ಆದೇಶ ಹೊರಡಿಸಲು ಕೋರಲಾಗುವುದು ಎಂದು ಅವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕೋವಿಡ್ ಸೋಂಕಿನೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ರೋಗಿಯ ಸಂಬಂಧಿಕರು ಸಚಿವರಲ್ಲಿ ತಮ್ಮ ಅಳಲು ತೋಡಿಕೊಂಡರು. ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಿ, ಇವರಿಗೆ ಚಿಕಿತ್ಸೆ ನೀಡಬೇಕೆಂದು ಸಚಿವರು ಸೂಚಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಡಿಎಚ್‍ಓ ಅವರು ಸ್ಥಳದಲ್ಲೇ ಜಿಲ್ಲಾಸ್ಪತ್ರೆಗೆ ಅಂಬ್ಯುಲೆನ್ಸ್‍ನಲ್ಲಿ ಸೋಂಕಿತನನ್ನು ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ ಅವರು ಜಿಲ್ಲೆಯಲ್ಲಿ ಲಭ್ಯ ಆಕ್ಸಿಜನ್ ಬೆಡ್, ರೆಮ್‍ಡಿಸಿವಿರ್ ಔಷಧಿ, ಕೋವಿಡ್ ಲಸಿಕೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸದಸ್ಯ ಅಮರೇಶ ನಾಯಕ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಸುರಪುರ ತಹಸಿಲ್ದಾರ್ ಸುಬ್ಬಣ್ಣ ಜಮಖಂಡಿ, ವೈದ್ಯಾಧಿಕಾರಿ ಡಾಕ್ಟರ್ ಹರ್ಷವರ್ಧನ್ ರಫಗಾರ ಮುಂತಾದವರು ಹಾಜರಿದ್ದರು.

ಶಹಾಪುರ ಆಸ್ಪತ್ರೆಗೆ ಭೇಟಿ: ಇದಕ್ಕೂ ಮುನ್ನ ಶಹಾಪುರ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗೂ ಯದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಅವರು, ಆಸ್ಪತ್ರೆಯ ಬೆಡ್, ಅಕ್ಸಿಜನ್ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ ಅವರು, 77 ವೆಂಟಿಲೇಟರ್ ವ್ಯವಸ್ಥೆ ಇದ್ದು, 66 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ದೋರನಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಕ್ಸಿಜನ್ ಪೂರೈಕೆ ಮಾಡುವ ಮೂಲಕ ಕೋವಿಡ್ ಅಸ್ಪತ್ರೆ ಅರಂಭಿಸುವಂತೆ ಸೂಚಿಸಿದರು.

ಕೋವಿಡ್ ಸೋಂಕಿತರು ಐಸೋಲೇಷನ್ ಇರದೆ ಹೊರಗಡೆ ಓಡಾಡುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸಚಿವರು ಪೊಳಿಸರಿಗೆ ಸೂಚಿಸಿದರು.